LATEST NEWS
ಉಡುಪಿಯಲ್ಲಿ ಸೆಪ್ಟೆಂಬರ್ 11ಕ್ಕೆ ಅಷ್ಟಮಿ ಆಚರಣೆ

ಉಡುಪಿ: ನಾಳೆ ಚಾಂದ್ರಮಾನ ಪದ್ದತಿಯ ಪ್ರಕಾರ ಅಷ್ಟಮಿ ನಡೆಯಲಿದ್ದು, ಉಡುಪಿ ಶ್ರೀಕೃಷ್ಣ ಮಠದಲ್ಲಿ ಸೌರಮಾನ ಪದ್ದತಿ ಅನುಸರಿಸುವುದರಿಂದ ನಾಳೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಅಷ್ಟಮಿ ಆಚರಣೆ ನಡೆಯುತ್ತಿಲ್ಲ.
ಇದರ ಬದಲು ಸೆಪ್ಟೆಂಬರ್ 11ಕ್ಕೆ ಶ್ರೀಕೃಷ್ಣಜನ್ಮಾಷ್ಟಮಿ ಆಚರಿಸಲು ಉಡುಪಿ ಕೃಷ್ಣಮಠ ತೀರ್ಮಾನಿಸಿದೆ.
ಅಗಸ್ಟ್ 11ಕ್ಕೆ ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯುತ್ತಿದ್ದು, ಕೃಷ್ಣನ ನಾಡು ಉಡುಪಿಯಲ್ಲಿ ಒಂದು ತಿಂಗಳು ನಂತರ ಆಚರಣೆ ನಡೆಯಲಿದೆ. ಶ್ರೀಕೃಷ್ಣ ಹುಟ್ಟಿದ್ದು, ಸಿಂಹಮಾಸ ಕೃಷ್ಣ ಪಕ್ಷ ರೋಹಿಣಿ ನಕ್ಷತ್ರ ಮೂಡುವ ಚಂದ್ರ ಉದಯದ ಕಾಲದಲ್ಲಿ. ಈ ತಿಂಗಳಲ್ಲಿ ನಾಳೆ ತಾರಾನುಕೂಲ ಇಲ್ಲದ ಕಾರಣ ಉಡುಪಿಯಲ್ಲಿ ಅಷ್ಟಮಿ ಆಚರಣೆ ನಡೆಸುತ್ತಿಲ್ಲ.

ಕೊರೊನಾ ಲಾಕ್‍ಡೌನ್ ನಂತರ ಉಡುಪಿ ಕೃಷ್ಣಮಠ ಭಕ್ತರಿಗೆ ಇನ್ನು ತೆರೆದುಕೊಂಡಿಲ್ಲ. ಸೆಪ್ಟೆಂಬರ್ ತಿಂಗಳ ನಂತರ ಪರಿಸ್ಥಿತಿಗಳನ್ನು ನೋಡಿಕೊಂಡು ಅಷ್ಟಮಿ ಆಚರಣೆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಪರ್ಯಾಯ ಅದಮಾರು ಮಠ ಮಾಹಿತಿ ನೀಡಿದೆ.
ಉಡುಪಿ ಕೃಷ್ಣಾಷ್ಠಮಿಗೆ ಪ್ರತಿವರ್ಷ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಅಲ್ಲದೆ ವಿಟ್ಲಪಿಂಡಿ ಮಹೋತ್ಸವು ವಿಜೃಂಭಣೆಯಿಂದ ನಡೆಯುತ್ತದೆ. ಆದರೆ ಸದ್ಯದ ಕೊರೊನಾ ಕಾಲದಲ್ಲಿ ಈ ಸಂಭ್ರಮ ನಡೆಯುವುದು ಅನುಮಾನವಾಗಿದೆ.