ಮಂಗಳೂರು, ಆ.10 :ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಎಂಬಲ್ಲಿ ಬಾಡಿಗೆ ಮನೆ ಕಟ್ಟಡವೊಂದರ ಒಂದು ಪಾರ್ಶ್ವ ಕುಸಿದು ಬಿದ್ದು ಮನೆ ಅಪಾಯಕ್ಕೆ ಸಿಲುಕಿದೆ. ಕಟ್ಟಡದಲ್ಲಿದ್ದ ಬಾಡಿಗೆ ಮನೆ ನಿವಾಸಿಗಳು ಅಪಾಯದಿಂದ ಪಾರಾಗಿದ್ದಾರೆ. ಮನೆಯ ಅಡುಗೆ ಕೋಣೆ ಇದ್ದ ಭಾಗದಲ್ಲಿ ಕುಸಿದು ಬಿದ್ದಿದ್ದು ಇಡೀ ಕಟ್ಟಡ ಅಪಾಯದಂಚಿನಲ್ಲಿದೆ.

ಮನೆ ಕಟ್ಟಡ ಪಿಲಾರಿನ ಲಕ್ಷ್ಮೀ ಕುಲಾಲ್ ಎಂಬವರಿಗೆ ಸೇರಿದ್ದು ಮನೆಯಲ್ಲಿ ಉಷಾ ಮತ್ತು ಅವರ ಇಬ್ಬರು ಮಕ್ಕಳು ಬಾಡಿಗೆಗೆ ನೆಲೆಸಿದ್ದರು. ಇಂದು ಬೆಳಿಗ್ಗೆ 6 ಗಂಟೆಯ ವೇಳೆಗೆ ಮನೆ ಹಿಂಭಾಗದ ತಗ್ಗು ಪ್ರದೇಶಕ್ಕೆ ಕುಸಿತ ಆಗಿದೆ.

ಬಾಡಿಗೆ ನಿವಾಸಿಯಾದ ಉಷಾ ರಾತ್ರಿ ಪಾಳಿ ಕೆಲಸಕ್ಕಿದ್ದು ಬೆಳಗ್ಗೆ ಬಂದಾಗ ಅಡುಗೆ ಕೋಣೆ ಕುಸಿದು ಬಿದ್ದಿತ್ತು. ಹಗಲಿನ ವೇಳೆ ಆಗುತ್ತಿದ್ದರೆ ಅನಾಹುತ ಆಗುತ್ತಿತ್ತು. ಅದೃಷ್ಟವಶಾತ್ ಸಂಭವನೀಯ ಪ್ರಾಣಾಪಾಯ ತಪ್ಪಿದಂತಾಗಿದೆ.

ಘಟನೆಯಿಂದಾಗಿ ಇಡೀ ಮನೆ ಕಟ್ಟಡ ಅಪಾಯದಲ್ಲಿದ್ದು ಯಾವುದೇ ಕ್ಷಣದಲ್ಲೂ ಕುಸಿದು ಬೀಳುವ ಹಂತದಲ್ಲಿದೆ. ಹತ್ತಿರದ ಅವರ ಸಂಬಂಧಿ ರಾಮಚಂದ್ರ ಕುಲಾಲ್ ಅವರ ಮನೆಯೂ ಕುಸಿಯುವ ಭೀತಿಯಲ್ಲಿದೆ. ಲಕ್ಷ್ಮೀ ಅವರ ಮನೆಯ ಹಿಂಬದಿ ಮನೆಯ ಮಾಲಕರು ಅಂಚಿನ ಮಣ್ಣನ್ನು ಅಗೆದಿರುವುದೇ ಈ ದುರ್ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಸೋಮೇಶ್ವರ ಪುರಸಭಾ ಅಧಿಕಾರಿ ಕೃಷ್ಣ, ಸ್ಥಳೀಯ ಪುರಸಭಾ ಸದಸ್ಯರಾದ ಪ್ರೇಮಾನಂದ, ಸುಜಾತ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.