Connect with us

    LATEST NEWS

    ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರ 33 ನೇ ಚಾತುರ್ಮಾಸ್ಯ ಸಮಾಪ್ತಿ

    ಉಡುಪಿ ಸೆಪ್ಟೆಂಬರ್ 3: ಉಡುಪಿಯ ನೀಲಾವರ ಗೋಶಾಲೆಯಲ್ಲಿರುವ ತಮ್ಮ ಶಾಖಾ ಮಠದಲ್ಲಿ 33 ನೇ ಚಾತುರ್ಮಾಸ್ಯ ವ್ರತವನ್ನು ನಡೆಸುತ್ತಿದ್ದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬುಧವಾರ ವ್ರತ ಸಮಾಪ್ತಿಗೊಳಿಸಿದರು .


    ಬೆಳಿಗ್ಗೆ ಪಟ್ಟದೇವರಾದ ಶ್ರೀರಾಮ ವಿಠಲ ದೇವರಿಗೆ ಮಹಾಪೂಜೆ ನೆರವೇರಿಸಿದ ಬಳಿಕ ಗೋಶಾಲೆಯ ಪುಷ್ಕರಿಣಿಯಲ್ಲಿ ಚಾತುರ್ಮಾಸ್ಯ ಮೃತ್ತಿಕಾ ವಿಸರ್ಜನೆಗೈದರು . ಅಪರಾಹ್ನ ಗೋಶಾಲೆಯಿಂದ ತಮ್ಮ ಶಿಷ್ಯರೊಡಗೂಡಿ ಮಹಿಳೆಯರ ಭಜನೆ ,ವಿದ್ಯಾರ್ಥಿಗಳ ಮಂತ್ರಘೋಷ ಗಳೊಂದಿಗೆ ಸಮೀಪದಲ್ಲಿರುವ ಸೀತಾನದೀ ತೀರಕ್ಕೆ ಆಗಮಿಸಿ ಅಲ್ಲಿ ನೀಲಾವರ , ಚೇರ್ಕಾಡಿ , ಪೇತ್ರಿ ಆರೂರು ಗ್ರಾಮಗಳು , ಬ್ರಹ್ಮಾವರ ತಾಲೂಕು ಪಂಚಾಯತ್ , ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ , ಬ್ರಹ್ಮಾವರ ಬ್ರಾಹ್ಮಣ ಸಂಘಗಳ ಪರವಾಗಿ ಶ್ರೀಗಳಿಗೆ‌ ಗೌರವಾರ್ಪಣೆ ನೆರವೇರಿತು .


    ಬಳಿಕ ಸೀತಾನದಿಗೆ ಸೀಯಾಳ , ಪುಷ್ಪ ಅರ್ಪಣೆ ಸಹಿತ ಮಂಗಳಾರತಿ ಬೆಳಗಿದರು . ಸಾಲಂಕೃತ ದೋಣಿಯಲ್ಲಿ ಕುಳಿತು ಸಾಂಕೇತಿಕವಾಗಿ ಸೀಮೋಲ್ಲಂಘನ ನಡೆಸಿದರು . ಮರಳಿ ಬಂದು ಗ್ರಾಮದೇವತೆ ಮಹಿಷಮರ್ದಿನೀ ದೇವಳಕ್ಕೆ ತೆರಳಿ ದೇವಿಯ ದರ್ಶನ ಪಡೆದರು. ದೇವಳದ ಪರವಾಗಿ ಆಡಳಿತ ಮಂಡಳಿ ಮುಖ್ಯಸ್ಥ ರಘುರಾಮ‌ ಮಧ್ಯಸ್ಥ ಹಾಗೂ ಪ್ರಧಾನ ಅರ್ಚಕ ಕೃಷ್ಣ ಅಡಿಗ ಮೊದಲಾದವರು ಶ್ರೀಗಳನ್ನು ಬರಮಾಡಿಕೊಂಡು , ದೇವಳದ ಗೌರವವನ್ನು ಅರ್ಪಿಸಿದರು .


    ಅಲ್ಲಿಂದ ಉಡುಪಿಗೆ ತೆರಳಿ ಶ್ರೀಕೃಷ್ಣ ಮುಖ್ಯಪ್ರಾಣರ ದರ್ಶನ ಪಡೆಯುವುದರೊಂದಿಗೆ ಚಾತುರ್ಮಾಸ್ಯ ವ್ರತ ಸಮಾಪ್ತಿಗೊಂಡಿತು . ಇದೇ ಸಂದರ್ಭ ಬಾರ್ಕೂರಿನ ಶ್ರೀ ಏಕನಾಥೇಶ್ವರೀ ದೇವಸ್ಥಾನದ ಹವ್ಯಾಸಿ ಯಕ್ಷಗಾನ ಸಂಘದ ಕಲಾವಿದರು ದಂಡಕ ದಮನ ಯಕ್ಷಗಾನ ಪ್ರಸಂಗದ ತಾಳಮದ್ದಲೆ ನಡೆಸಿಕೊಟ್ಟರು .

    Share Information
    Advertisement
    Click to comment

    Leave a Reply

    Your email address will not be published. Required fields are marked *