KARNATAKA
ಉಡುಪಿ : ಮಹಾಲಕ್ಷ್ಮೀ ಬ್ಯಾಂಕ್ ನಲ್ಲಿ ಕೋಟ್ಯಂತರ ರೂ. ಅವ್ಯವಹಾರ ಆರೋಪ, ರಾಜ್ಯ ಸರಕಾರದ ಮಧ್ಯ ಪ್ರವೇಶಕ್ಕೆ ಮಾಜಿ ಶಾಸಕ ರಘುಪತಿ ಭಟ್ ಆಗ್ರಹ
ಉಡುಪಿ : ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಮಲ್ಪೆ ಶಾಖೆಯಲ್ಲಿ ನಡೆದಿದೆಯೆನ್ನಲಾದ ಕೋಟ್ಯಂತರ ರೂ. ಅವ್ಯವಹಾರದ ಸಂಬಂಧ ರಾಜ್ಯ ಸರಕಾರದ ಮಧ್ಯ ಪ್ರವೇಶಕ್ಕೆ ಮಾಜಿ ಶಾಸಕ ರಘುಪತಿ ಭಟ್ ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ನೂರಾರು ಸಂತ್ರಸ್ತರ ಸಮ್ಮುಖದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಭಟ್ ಬ್ಯಾಂಕಿನ ವ್ಯವಸ್ಥಾಪನಾ ನಿರ್ದೇಶಕರು ಪತ್ರ ಬರೆದು ನ.9ರಂದು ಬೆಳಗ್ಗೆ 9.30ಕ್ಕೆ ಕರಂಬಳ್ಳಿ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಆಹ್ವಾನ ನೀಡಿದ್ದು, ನನ್ನ ಮಧ್ಯಸ್ಥಿಕೆಯಲ್ಲಿ ಸಂತ್ರಸ್ತರು ಕೂಡ ಈ ಕುರಿತು ಆಣೆ ಪ್ರಮಾಣಕ್ಕೆ ಸಿದ್ಧರಾಗಿದ್ದಾರೆ ಎಂದರು. ಆಣೆ ಪ್ರಮಾಣದ ವೇಳೆ ಸಂತ್ರಸ್ತರ ಸಹಿ ಇರುವ ಸಾಲ ಪತ್ರವನ್ನು ಕೂಡ ಬ್ಯಾಂಕಿನವರು ತೆಗೆದುಕೊಂಡು ಬರಬೇಕು. ಅಲ್ಲದೆ ಸಾಲ ಕೊಡುವ ಸಂದರ್ಭದಲ್ಲಿದ್ದ ಆಡಳಿತ ಮಂಡಳಿ, ಸಿಬ್ಬಂದಿ ಕೂಡ ಹಾಜರು ಇರಬೇಕು. ಈ ಮೂಲಕ ಸತ್ಯಾಸತ್ಯತೆ ಹೊರಬರಬೇಕು ಮತ್ತು ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು. ಬ್ಯಾಂಕಿನ ಸಾಲ ಪಡೆದು ಪೂರ್ಣ ಪ್ರಮಾಣದಲ್ಲಿ ಕಟ್ಟಿದ್ದರೂ ಸಾಲ ಬಾಕಯಿದೆ ಎಂದು ಅವರ ಮನೆಗಳಿಗೆ ತೆರಳಿ ಕಿರುಕುಳ ನೀಡಲಾಗುತ್ತಿದೆ. ಅದೇ ರೀತಿ ಮೀನುಗಾರರ ಸಾಲ ಎಂದು ಹೇಳಿ ಕೆಲವರಿಂ ದ ಚೆಕ್ ತೆಗೆದು, ಸಹಿ ಪಡೆದುಕೊಳ್ಳಲಾಗಿದೆಯಾದ್ರೂ ಹಣವೇ ಸಿಕ್ಕಿಲ್ಲ ಆದರೆ 3ಲಕ್ಷ ರೂ. ಸಾಲ ಪಾವತಿಸುವಂತೆ ಇವರಿಗೂ ನೋಟೀಸ್ ಬಂದಿದೆ. ಅಲ್ಲದೆ ಇವರ ಸಹಿಯನ್ನು ಬಳಸಿ ಹಣವನ್ನು ಡ್ರಾ ಮಾಡಲಾಗಿದೆ ಎಂದರು. ಸಾಲ ನೀಡಿದ ಬ್ಯಾಂಕಿನ ಆಗಿನ ವ್ಯವಸ್ಥಾಪಕ ಸುಬ್ಬಣ್ಣ ಹಲವು ಸಮಯಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ರೀತಿ ಸಾಲ ನೀಡಿರುವುದನ್ನು ಅವರು ಆಡಳಿತ ಮಂಡಳಿಯ ಎದುರೇ ಒಪ್ಪಿಕೊಂಡಿದ್ದಾರೆ.
ಆದುದರಿಂದ ಇದಕ್ಕೆ ಆಡಳಿತ ಮಂಡಳಿ ಕೂಡ ಜವಾಬ್ದಾರಿಯಾಗಿದೆ. ಈ ಅವ್ಯವಹಾರಗಳ ಅರಿವಿಲ್ಲ ಎಂದು ಹೇಳಿದರೆ ಅದು ಆಡಳಿತ ಮಂಡಳಿಯ ಬೇಜವಾಬ್ದಾರಿ ಯಾಗುತ್ತದೆ ಎಂದರು. ಸಂತ್ರಸ್ತರು ತಾವು ಪಡೆದ ಸಾಲದ ಹಣವನ್ನು ಬಡ್ಡಿ ಸಮೇತ ಮರು ಪಾವತಿಸಲು ಸಿದ್ಧರಿದ್ದಾರೆ. ಉಳಿದ ಹಣವನ್ನು ವಂಚನೆ ಮಾಡಿದವರಿಂದ ವಸೂಲಿ ಮಾಡಬೇಕು.
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಬೇನಾಮಿ ಸಾಲದ ಅಕ್ರಮ ಎಸಗಿರುವ ಬಗ್ಗೆ, ಸಂತ್ರಸ್ಥರು ನೀಡಿರುವ ದೂರಿನಂತೆ ಸರ್ಕಾರ ಮಧ್ಯ ಪ್ರವೇಶಿಸಿ ಸಹಕಾರ ಇಲಾಖೆಯಿಂದ ಕಲಂ 64ರ ಪ್ರಕಾರ ತನಿಖೆ ನಡೆಸಿ ಈ ಪ್ರಕರಣವನ್ನು ಗೃಹ ಇಲಾಖೆಯ ಎಸ್‌ಐಟಿ ಮೂಲಕ ತನಿಖೆ ನಡೆಸಬೇಕು. ಸಾಲಾಗಾರರ ಹಸ್ತಾಕ್ಷರದ ಪ್ರತಿಯನ್ನು ಪೊಲೀಸ್ ಇಲಾಖೆಯ ಮೂಲಕ ಫಾರೆನ್ಸಿಕ್ ಸಂಸ್ಥೆಗೆ ಕಳುಹಿಸಿ ಪರೀಕ್ಷಿಸಿ ಹಸ್ತಾಕ್ಷರದ ಸತ್ಯಾಸತ್ಯತೆಯನ್ನು ಹೊರಗೆಳೆಯಬೇಕು. ಆಕ್ರಮ ಎಸಗಿದ ತಪ್ಪಿತಸ್ಥರು ಯಾರೆಂಬುದು ಜನತೆಗೆ ತಿಳಿಯಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಸಂತ್ರಸ್ತರು ಸಾಲದಿಂದ ಋಣ ಮುಕ್ತರಾಗಿ ನೆಮ್ಮದಿಯ ಜೀವನ ನಡೆಸಬೇಕು. ಹಾಗಾಗಿ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು. ಸಂತ್ರಸ್ತರಿಗೆ ಸಹಾಯ ಮಾಡುವ ದೃಷ್ಠಿ ಯಿಂದ ಕಾನೂನು ಹೋರಾಟಕ್ಕೆ ವಕೀಲರ ನೇಮಕ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.