Connect with us

    BANTWAL

    ಕಾರ್ಕಳ : ವಿಶೇಷ ಮಕ್ಕಳ ನಿಸ್ವಾರ್ಥ ಸೇವಕಿ ‘ಅರುಣೋದಯ ಸಿಸ್ಟರ್’ ಇನ್ನು ನೆನಪು ಮಾತ್ರ..!!

    ಕಾರ್ಕಳ:   ಸುಮಾರು 35 ವರ್ಷಗಳಿಂದ ವಿಶೇಷ ಮಕ್ಕಳ ನಿಸ್ವಾರ್ಥ ಸೇವೆ ಸಲ್ಲಿಸಿದ್ದ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಜೊತೆ ಹಲವಾರು ಪ್ರಶಸ್ತಿ ಸಮ್ಮಾನಗಳನ್ನು  ಪಡೆದಿದ್ದ ಅರುಣೋದಯ ಸಿಸ್ಟರ್ ಎಂದೇ ಖ್ಯಾತರಾಗಿದ್ದ ಡೊನಾಲ್ದಾ ಪಾಯಸ್ (81) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

    ಸಿಸ್ಟರ್ ಡೊನಾಲ್ಟಾ ಪಾಯಸ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕರಿಂಗಾಣ ಗ್ರಾಮದ ಸೆಬಾಸ್ಟಿನ್ ಪಾಯ್ಸ್ ಮತ್ತು ಪೌಲಿನ ಫೆರ್ನಾಂಡೀಸ್ ರವರ ಪುತ್ರಿಯಾಗಿದ್ದಾರೆ.  ಬಂಟ್ವಾಳ ಕರಿಂಗಾಣದ ಸೈಂಟ್ ಆಂಟನಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಕಾರ್ಮೆಲ್ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣವನ್ನು, ಸೈಂಟ್ ಆಗ್ನೆಸ್ ಮಂಗಳೂರಿನಲ್ಲಿ ಪದವಿ ಶಿಕ್ಷಣವನ್ನು ಮುಗಿಸಿ ಬಿ. ಎಡ್ ಶಿಕ್ಷಣವನ್ನು ಸೈಂಟ್ ಆನ್ಸ್‌ನಲ್ಲಿ ಮುಗಿಸಿದರು. ವಿಧ್ಯಾಭ್ಯಾಸ ಮುಗಿಸಿದ ನಂತರ ಬೆಥನಿ ಸಂಸ್ಥೆಯಲ್ಲಿ ನೋವಿಶೆಡ್ ತರಬೇತಿಯನ್ನು ಪಡೆದು 1971 ರಲ್ಲಿ ಕನ್ಯಾಶ್ರೀ ಪಟ್ಟವನ್ನು ಸ್ವೀಕರಿಸಿದರು. ಇವರ ಹೆಸರು ಮಾರ್ಸೆಲಿನ್ ಪಾಯ್ಸ್ ನಿಂದ ಸಿಸ್ಟರ್ ಡೊನಾಲ್ಟಾ ಪಾಯ್ಸ್ ಎಂದು ಮರುನಾಮಕರಣ ವಾಯಿತು. ನಂತರ ಇವರು ಸಿಸ್ಟರ್ ಆಗಿ 1968 ರಲ್ಲಿ ಪ್ರೌಢಶಾಲೆ ಶಿಕ್ಷಕಿಯಾಗಿ ಸರ್ಕಾರದಿಂದ ನೇಮಕಗೊಂಡರು. ನಂತರ ರೋಸ ಮಿಸ್ತಿಕಾ ಹೈಸ್ಕೂಲ್, ಲೊಯೊಲಾ ಹೈಸ್ಕೂಲ್, ಮೈಸೂರಿನ ಕೆ. ಆರ್ ನಗರದ ಪ್ರೌಢಶಾಲೆಯಲ್ಲಿ ಸಹಶಿಕ್ಷಕಿಯಾಗಿ, ಅಜೆಕಾರು ಜ್ಯೋತಿ ಹೈಸ್ಕೂಲ್‌ನಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದರು. ಶಿಕ್ಷಕ ಸೇವೆ ಸಲ್ಲಿಸುತ್ತಿರುವಾಗ ಇವರಿಗೆ ದೇವರ ಸಂದೇಶವೊಂದು ಕೇಳಿ ಬಂತು.

    ಅದೇ ವಿಕಲಚೇತನ ಮಕ್ಕಳ ಸೇವೆ. ಸಮಾಜದಲ್ಲಿರುವ ವಿಕಲಚೇತನ ಮಕ್ಕಳನ್ನು ಗುರುತಿಸಿ ಅವರಿಗೆ ಶಿಕ್ಷಣವನ್ನು ನೀಡಿ ಅವರನ್ನು ಸ್ವಾವಲಂಬಿಗಳಾಗಿ ಮಾಡಬೇಕೆಂಬ ಅನುಕಂಪ ಮೂಡಿತು. ಅದರಂತೆಯೇ ಅಜೆಕಾರು ಜ್ಯೋತಿ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸುತ್ತಿರುವಾಗಲೇ ಕಾರ್ಕಳ ವ್ಯಾಪ್ತಿಯಲ್ಲಿ ಸರ್ವೆ ಮಾಡಿ 2000ನೇ ಸಾಲಿನಲ್ಲಿ ಜೀವನ್ ವೆಲ್‌ ಫೇರ್ ಟ್ರಸ್ಟ್ (ರಿ) ಎಂಬ ಎನ್.ಜಿ.ಒ ನ್ನು ಸ್ಥಾಪಿಸಿ ಕಾರ್ಕಳ ಪೇಟೆಯ ಸಪ್ತಗಿರಿ ಕಾಂಪ್ಲೆಕ್ಸ್‌ನ ಬಾಡಿಗೆ ಮನೆಯಲ್ಲಿ 4 ಬುದ್ದಿಮಾಂದ್ಯ ಮಕ್ಕಳನ್ನು ಒಟ್ಟುಗೂಡಿಸಿ ಈ ಬುದ್ದಿಮಾಂದ್ಯ ಮಕ್ಕಳ ತರಬೇತಿಗಾಗಿ ಅರುಣೋದಯ ವಿಶೇಷ ಶಾಲೆಯನ್ನು ಆರಂಭಿಸಿದರು.

    ದಿನೇ ದಿನೇ ಹೋದಂತೆ ಮಕ್ಕಳ ಸಂಖ್ಯೆ ಹೆಚ್ಚುತ್ತಾ ಬಂತು. ನಂತರ ಅಲ್ಲಿಂದ ಮಗ್ದಾಲಿನಾದಲ್ಲಿ ವರ್ಗಾವಣೆಗೊಂಡು ಅಲ್ಲಿ 3 ವರ್ಷ ಶಾಲೆಯನ್ನು ನಡೆಸಿದರು. ಮಗ್ಗಲಿನಾದಲ್ಲಿ ಶಾಲೆ ನಡೆಸುತ್ತಿರು ವಾಗಲೇ ಮಾಳದಲ್ಲಿ ಆರುಣೋದಯದ ವಿಶೇಷ ಶಾಲೆಯ ಶಾಖೆಯನ್ನು ತೆರೆದರು. ಆದರೆ ಮಗ್ಗಲಿನಾದಲ್ಲಿ ಮಕ್ಕಳ ಸಂಖ್ಯೆ ಹೆಚ್ಚುತ್ತಾ ಬಂದುದರಿಂದ ಮಾಳದಲ್ಲಿರುವ ಶಾಖೆಯನ್ನು ಮುಂದುವರೆಸಲು ಅಸಾಧ್ಯವಾಯಿತು.

    ಅದೇ ಸಾಲಿನಲ್ಲಿ ಅರುಣೋದಯ ವಿಶೇಷ ಶಾಲೆಗೆ ಸ್ವತಹ ಕಟ್ಟಡವನ್ನು ಮಾಜಿ ಶಾಸಕ ದಿ. ಗೋಪಾಲ್ ಭಂಡಾರಿಯವರ ಶಿಫಾರಸಿನ ಮೇರೆಗೆ ಅವರ ಇಚ್ಚೆಯಂತೆ ಅಂದಿನ ತಹಶೀಲ್ದಾರರು 0.86 ಸೆನ್ಸ್ ಜಾಗವನ್ನು ಮಂಜೂರು ಮಾಡಿದರು. ನಿರಂತರ ಶ್ರಮದಿಂದ ತನ್ನ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾದರು. 2000 ನೇ ಸಾಲಿನಲ್ಲಿ ತನ್ನ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದರು. ಬೆಥನಿ ಸಂಸ್ಥೆಯನ್ನು ತ್ಯಜಿಸಿ ವೈಯುಕ್ತಿಕವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡರು. ಬರುತ್ತಿದ್ದ ಪಿಂಚಣಿ ಹಣ ಮತ್ತು ಇತರೇ ಕೆಲವು ದಾನಿಗಳ ಸಹಾಯದಿಂದ ಈ ಜಾಗದಲ್ಲಿ ಕಟ್ಟಡವನ್ನು ಕಟ್ಟಲು ಆರಂಭಿಸಿ ದರು. 2004 ರಲ್ಲಿ ಅರುಣೋದಯ ವಿಶೇಷ ಶಾಲೆಯ ಈ ಕಟ್ಟಡವು ಪೂರ್ಣಗೊಂಡು ಮಗ್ದಾಲಿನಾದಿಂದ ವಿಕಲಚೇತನ ಮಕ್ಕಳು ಈ ಶಾಲೆಗೆ ವರ್ಗಾವಣೆಗೊಂಡರು.

    ಅಂದಿನಿಂದ ಇಲ್ಲಿಯವರೆಗೆ ಈ ಶಾಲೆಯನ್ನು ಸಿಸ್ಟರ್ ಡೊನಾಲ್ಟಾ ಪಾಯ್ಸ್ ರವರು ಶ್ರಮ ಮತ್ತು ಜವಾಬ್ದಾರಿಯಿಂದ ಉಚಿತವಾಗಿ ನಡೆಸಿಕೊಂಡು ಬಂದಿದ್ದು ತನ್ನ ಜೀವನವನ್ನೇ ವಿಶೇಷ ಮಕ್ಕಳ ಸೇವೆಗಾಗಿ ಮುಡಿಪಾಗಿಟ್ಟಿದ್ದರು.

    ಇವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ಸಚಿವ ಶಾಸಕ ವಿ ಸುನಿಲ್ ಕುಮಾರ್, ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ, ಕ್ರೈಸ್ಟ್ ಕಿಂಗ್ ಎಜುಕೇಷನ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಅವೆಲಿನ್ ಲೂಯಿಸ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯ್ಕ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ್ ಜೈನ್, ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ, ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕಾರ್ಕಳ ತಾಲೂಕು ಅಧ್ಯಕ್ಷ ಮೊಹಮ್ಮದ್ ಗೌಸ್, ರೋಟರಿ ಕ್ಲಬ್ ಅಧ್ಯಕ್ಷ ಇಕ್ಬಾಲ್ ಅಹಮದ್, ಕಾಂಗ್ರೆಸ್ ಮುಖಂಡ ಪುರಸಭೆ ಮಾಜಿ ಸದಸ್ಯ ವಿವೇಕಾನಂದ ಶೆಣೈ ಸಮಾಜ ಸೇವಕಿ ಕಾಂತಿ ಶೆಟ್ಟಿ , ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್, ಪುರಸಭಾ ಮಾಜಿ ಅಧ್ಯಕ್ಷರಾದ ಸುಬಿತ್ ಏನ್ ಆರ್, ರೆಹಮತ್ ಏನ್ ಶೇಖ್, ಪುರಸಭಾ ಸದಸ್ಯೆ ನಳಿನೀ ಆಚಾರ್ಯ ಸಂತಾಪ ಸೂಚಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *