LATEST NEWS
ಉಡುಪಿ – ನಾಮಫಲಕದಲ್ಲಿ ಶೇಕಡ 60 ರಷ್ಟು ಕನ್ನಡ ಕಡ್ಡಾಯ..ತಪ್ಪಿದ್ದಲ್ಲಿ ಪರವಾನಿಗೆ ರದ್ದು : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ
ಉಡುಪಿ, ಮಾರ್ಚ್ 12 : ಸರಕಾರದ ಆದೇಶದ ಅನ್ವಯ ಸ್ಥಳೀಯ ಪ್ರಾಧಿಕಾರ, ನಗರಸಭೆ, ಪುರಸಭೆ, ಗ್ರಾಮ ಪಂಚಾಯತಿಗಳಿಂದ ಅನುಮತಿ ಪಡೆದು ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ ಕಟ್ಟಡ, ಕೈಗಾರಿಕೆ, ಆಸ್ಪತ್ರೆ, ಪ್ರಯೋಗಾಲಯಗಳು, ಹೋಟೆಲ್ ಸೇರಿದಂತೆ ಮತ್ತಿತರ ವಾಣಜ್ಯ ಸಂಸ್ಥೆಗಳು ಅನಾವರಣಗೊಳಿಸಿರುವ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡದ ಭಾಷೆ ಬಳಕೆ ಕಡ್ಡಾಯವಾಗಿರಬೇಕೆಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ಅಧಿಕೃತ ಭಾಷೆಯ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ ಮತ್ತು ತಿದ್ದುಪಡಿ ವಿಧೇಯಕ ಅನುಸಾರ ನಗರ ಪ್ರದೇಶದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರ ಮತ್ತು ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿಯೊAದಿಗೆ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್ ಗಳು , ಸಮಾಲೋಚನೆ ಕೇಂದ್ರ, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮಳಿಗೆಗಳು, ಬ್ಯಾಂಕ್‌ಗಳು, ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು, ಹೋಟೆಲ್‌ಗಳು ಹಾಗೂ ಎಲ್ಲ ಖಾಸಗಿ ಸಂಸ್ಥೆಗಳು, ಮನರಂಜನಾ ಕೇಂದ್ರಗಳು, ಹೋಟೆಲ್‌ಗಳು ಒಳಗೊಂಡAತೆ ಇತರೆ ಸಂಸ್ಥೆಗಳು ಅಳವಡಿಸಿರುವ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಶೇ.60ರಷ್ಟಯ ಪ್ರಮಾಣದಲ್ಲಿ ಪ್ರದರ್ಶಿಸಲಾಗಿದೆ ಮತ್ತು ನಾಮಫಲಕದಲ್ಲಿ ಕನ್ನಡ ಭಾಷೆಯು ಮೇಲ್ಭಾಗದಲ್ಲಿ ಪ್ರದರ್ಶಿತವಾಗಿದೆ. ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದು ಅಧಿಖಾರಿಗಳಿಗೆ ಸೂಚನೆ ನೀಡಿದರು.
ರಸ್ತೆಗಳು ಮತ್ತು ಬಡಾವಣೆ ಪ್ರದೇಶಗಳ ಹೆಸರು ಸೇರಿದಂತೆ ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳ ಮತ್ತು ಸ್ಥಳೀಯ ಪ್ರಾಧಿಕಾರಗಳ ಮೇಲ್ವಿಚಾರಣೆಯಲ್ಲಿ ಹಾಕಲಾಗಿರುವ ಫಲಕಗಳ ಮೇಲೆ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಎಂದರು. ಕನ್ನಡ ಭಾಷೆಯಲ್ಲಿ ನಿಯಮಾನುಸಾರ ನಾಮಫಲಕ ಅಳವಡಿಸದೇ ಇರುವವರಿಗೆ 7 ದಿನ ಕಾಲಾವಕಾಶ ನೀಡಿ, ನಿಯಮದ ಬಗ್ಗೆ ಅರಿವು ಮೂಡಿಸಿ, ನಾಮಫಲಕಗಳಲ್ಲಿ ಶೇ.60ರ ಪ್ರಮಾಣದಲ್ಲಿ ಕನ್ನಡ ಭಾಷೆಯಲ್ಲಿ ನಾಮಫಲಕ ಬರೆಸಿ ಅಳವಡಿಸುವಂತೆ ತಿಳುವಳಿಕೆ ನೀಡಿ, ಕಾಲಮಿತಿಯೊಳಗೆ ಅಳವಡಿಕೆಗೆ ಸೂಚನೆ ನೀಡಿ ಎಂದರು.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮದ ಅನ್ವಯ ಸರಕಾರ ಅಥವಾ ಸ್ಥಳೀಯ ಪ್ರಾಧಿಕಾರದ ಅನುಮತಿ ಅಥವಾ ಮಂಜೂರಾತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ ಹಾಗೂ ವ್ಯವಹಾರ ಉದ್ಯಮಗಳು, ಟ್ರಸ್ಟ್ ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು, ಹೋಟೆಲ್ ಸೇರಿದಂತೆ ಮುಂತಾದವುಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಬಳಸಬೇಕು. ಒಂದೊಮ್ಮೆ ಅದನ್ನು ಉಲ್ಲಂಘಿಸಿದರೆ ಮೊದಲನೆಯ ಅಪರಾಧಕ್ಕೆ 5000 ದಂಡ, ಎರಡನೇ ಅಪರಾಧಕ್ಕೆ 10,000 ಹಾಗೂ ನಂತರದ ಪ್ರತಿಯೊಂದು ಅಪರಾಧಕ್ಕೆ 20000 ದಂಡದೊಂದಿಗೆ ಪರವಾನಿಗೆಯನ್ನು ರದ್ದುಗೊಳಿಸಲಾಗುತ್ತದೆ ಎಂದರು. ಸರ್ಕಾರಿ ಮತ್ತು ಸರ್ಕಾರದ ಅಧೀನ ಸಂಸ್ಥೆಗಳು, ಸ್ಥಳೀಯ ಪ್ರಾಧಿಕಾರಿಗಳು ಹೊರಡಿಸುವ ಎಲ್ಲ ಟೆಂಡರ್ ಅಧಿಸೂಚನೆ, ಜಾಹೀರಾತುಗಳು, ಅರ್ಜಿ ನಮೂನೆ, ಡಿಜಿಟಿಲ್ ನಮೂನೆ ಪ್ರಮಾಣಪತ್ರ ಮತ್ತು ಅಧಿಸೂಚನೆಗಳು, ಬ್ಯಾನರ್, ಫ್ಲೆಕ್ಸ್, ಎಲೆಕ್ಟ್ರ‍್ರಾನಿಕ್ ಫಲಕಗಳು, ನೋಟೀಸ್‌ಗಳು, ರಸೀದಿ ಬಿಲ್ಲುಗಳು, ಪತ್ರವ್ಯವಹಾರಗಳು ಪ್ರಮುಖವಾಗಿ ನಿಯಮಾನುಸಾರ ಕನ್ನಡ ಭಾಷೆಯಲ್ಲೇ ಇರುವಂತೆ ನೋಡಿಕೊಳ್ಳಬೇಕು ಎಂದರು.