UDUPI
ಸಾಂತ್ವನ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಸಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್
ಸಾಂತ್ವನ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಸಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್
ಉಡುಪಿ, ಜನವರಿ 24 : ಸಾಂತ್ವನ ಕೇಂದ್ರದಲ್ಲಿ ಕರ್ತವ್ಯ ನಿರ್ವಹಣೆಗೆ ಪೂರಕವಾಗಿ ಸಿಸಿಟಿವಿ ಅಳವಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಹೇಳಿದರು.
ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸಾಂತ್ವನದಡಿ ಕರ್ತವ್ಯ ನಿರ್ವಹಿಸುತ್ತಿರುವ ಸಮಾಲೋಚಕಿಯರ ಕರ್ತವ್ಯ ನಿರ್ವಹಣೆಗೆ ಅನುಕೂಲವಾಗುವಂತೆ ತಾಂತ್ರಿಕವಾಗಿ ವ್ಯವಸ್ಥೆಯನ್ನು ಉನ್ನತೀಕರಿಸಿ ಎಂದು ಜಿಲ್ಲಾಧಿಕಾರಿಗಳು ಮಾರ್ಗದರ್ಶನ ನೀಡಿದರು.
ಜಿಲ್ಲೆಯಲ್ಲಿ ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಪೊಲೀಸ್ ವ್ಯವಸ್ಥೆ ಮತ್ತು ಕಾನೂನು ನೆರವು ಪ್ರಾಧಿಕಾರದ ನೆರವನ್ನು ಪಡೆದುಕೊಳ್ಳಿ ಎಂದ ಅವರು, ಮಹಿಳೆ ಮತ್ತು ಮಕ್ಕಳ ಗ್ರಾಮಸಭೆಗಳಲ್ಲಿ ಮಂಡಿಸಿದ ಬೇಡಿಕೆಗಳಿಗೆ ಸ್ಪಂದಿಸಲು ಇದೇ ಸಭೆಯಲ್ಲಿ ಚರ್ಚಿಸಲು ವಿಷಯ ಮಂಡನೆ ಮಾಡಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಗ್ರೇಸಿ ಗೊನ್ಸಾಲ್ವಿಸ್ ಅವರಿಗೆ ಸೂಚಿಸಿದರು.
ಬಾಲ್ಯ ವಿವಾಹಗಳ ಪ್ರಕರಣ ಈ ಬಾರಿ ಒಟ್ಟು 4 ದಾಖಲಾಗಿದ್ದು, ಕಳೆದ ಸಾಲಿನಲ್ಲಿ ಎರಡು ಪ್ರಕರಣವಿತ್ತು. ಬಾಲ್ಯ ವಿವಾಹಕ್ಕೆ ಇತಿಶ್ರೀ ಹಾಡಲು ಧಾರ್ಮಿಕ ಮುಖಂಡರು ಮತ್ತು ಕಲ್ಯಾಣ ಮಂಟಪದವರಿಗೂ ಮಾಹಿತಿ ನೀಡಿ. ಕಾನೂನು ಪ್ರಕಾರ ದಂಡನೆ ವಿಧಿಸಲು ಇರುವ ಕಾಯಿದೆಗಳನ್ನು ವಿವರಿಸಿ. ಕಾನೂನು ಗೊತ್ತಿರಲಿಲ್ಲ ಎನ್ನುವುದು ಉತ್ತರವಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಐಟಿಡಿಪಿ ಇಲಾಖೆಯಿಂದ ಕೊರಗ ಸಮುದಾಯದವರಿಗೆ ಬಾಲ್ಯ ವಿವಾಹದ ಬಗ್ಗೆ ಅರಿವು ಕಾರ್ಯಕ್ರಮ ರೂಪಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಮದುವೆ ಮಾಡಿಸುವವರು ಮತ್ತು ಮಾಡಲ್ಪಡುವ ಜಾಗದಲ್ಲಿ ವಯಸ್ಸಿನ ದೃಢೀಕರಣ ಪತ್ರವಿರಲಿ ಎಂದರು. ಜಿಲ್ಲೆಯಲ್ಲಿ ಮಹಿಳಾ ನಿಲಯ ಉಡುಪಿಯಲ್ಲಿರುವ ಮಾನಸಿಕ ಅಸ್ವಸ್ಥ ಮಹಿಳೆಯರನ್ನು ಶಿವಮೊಗ್ಗದ ಪ್ರತ್ಯೇಕ ಸಂಸ್ಥೆಗೆ ವರ್ಗಾಯಿಸಲು ನಿರ್ದೇಶಕರ ಅನುಮತಿಗೆ ಕೋರಲಾಗಿದ್ದು, ಅನುಮತಿ ದೊರೆಯಲಿದೆ ಎಂದು ಉಪನಿರ್ದೇಶಕರು ವಿವರಿಸಿದರು.
ಸ್ವಚ್ಚ ಭಾರತ ತರಬೇತಿಯಡಿ ತರಬೇತಿ ಪಡೆದ ಮಹಿಳಾ ನಿಲಯದ ನಿವಾಸಿಗಳಿಗೆ ನಗರಸಭೆಯೊಂದಿಗೆ ಸಮನ್ವಯ ಸಾಧಿಸಿ ಬಟ್ಟೆ ಬ್ಯಾಗ್ ತಯಾರಿಸಿ ವಿತರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.