Connect with us

    UDUPI

    ನೀರನ್ನು ವಿವೇಚನೆಯಿಂದ ಬಳಸಿ – ಶಿವಾನಂದ ಕಾಪಶಿ

    ನೀರನ್ನು ವಿವೇಚನೆಯಿಂದ ಬಳಸಿ – ಶಿವಾನಂದ ಕಾಪಶಿ

    ಉಡುಪಿ, ಜನವರಿ 24: ಹನಿ ನೀರನ್ನು ಉತ್ಪಾದಿಸಲಾಗದ ನಮಗೆ ನೀರನ್ನು ಪೋಲು ಮಾಡುವ ಅಧಿಕಾರವಿಲ್ಲ. ಪ್ರಕೃತಿಯ ವರದಾನವಾದ ನೀರಿನ ಸಂರಕ್ಷಣೆ ಎಲ್ಲರ ಕರ್ತವ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

    ಅವರು ಇಂದು ಅಂತರ್ಜಲ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಅಂತರ್ಜಲ ಕಚೇರಿ ಉಡುಪಿ ಇವರ ಸಹಯೋಗದಿಂದ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ, ಸಭಾಂಗಣದಲ್ಲಿ ಪಟ್ಟಣ, ನಗರ ಪ್ರದೇಶದ ಮುಖ್ಯಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್‍ನ ಅಭಿವೃದ್ಧಿ ಅಧಿಕಾರಿಗಳಿಗೆ ನಡೆದ ಅಂತರ್ಜಲ ಸದ್ಭಳಕೆ, ಸಂರಕ್ಷಣೆ, ಮರುಬಳಕೆ, ನಿರ್ವಹಣೆ ಮತ್ತು ಅತಿಬಳಕೆ ನಿಯಂತ್ರಣ, ಮಾಲಿನ್ಯ ತಡೆಗಟ್ಟುವಿಕೆ ಹಾಗೂ ತೆರೆದ ಕೊಳವೆ ಬಾವಿಗಳಲ್ಲಿ ಮಕ್ಕಳು ಬೀಳದಂತೆ ನಿಯಂತ್ರಿಸುವ ಕುರಿತು ಅಂತರ್ಜಲ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

    ನಮ್ಮ ಪೂರ್ವಜರು ನಮಗಾಗಿ ಉಳಿಸಿಹೋದ ಪರಿಸರವನ್ನು , ಮಾನವ ತನ್ನ ದುರಾಸೆಯಿಂದ ಹಾಳುಗೆಡವುತ್ತಿದ್ದು, ಕಳೆದ 20 ರಿಂದ 25 ವರ್ಷಗಳಲ್ಲಿ ಭೂಮಿ ತನ್ನ ಒಡಲಾಳಾದಲ್ಲಿ ಶೇಖರಿಸಿಟ್ಟ ನೀರನ್ನು ನಾವು ಬಳಸಿದ್ದೇವೆ. ವಿವೇಚನೆ ರಹಿತ ಬಳಕೆಯಿಂದ ಮುಂದೆ ನೀರಿಗಾಗಿ ಯುದ್ದ ನಡೆಯಲಿದೆ ಎಂದರು.

    ಸಮಸ್ಯೆಗಳ ಬಗ್ಗೆ ತಿಳುವಳಿಕೆಯುಳ್ಳ ಜನರಿಗೆ ಅರಿವಿದ್ದರೂ ಮುಂದಿನ ಪೀಳಿಗೆಗೆ ಜೀವಜಲವನ್ನು ರಕ್ಷಿಸಬೇಕೆಂಬ ಕಾಳಜಿ ಇಲ್ಲ. ಈ ಕಾಳಜಿಯನ್ನು ಕಾನೂನಿನ ಮೂಲಕ ಅನುಷ್ಟಾನಕ್ಕೆ ತರಲು ಇಂಥ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದರು.

    ಸಂಪನ್ಮೂಲ ವ್ಯಕ್ತಿಯಾಗಿ ಎಂ.ಐ.ಟಿ., ಸಿವಿಲ್ ವಿಭಾಗದ ಪ್ರಾಧ್ಯಾಪಕ ಡಾ.ನಾರಾಯಣ ಶೆಣೈ ಇವರು ಉಪನ್ಯಾಸ ನೀಡಿ, ನೀರಿನ ಬಳಕೆ ನಮ್ಮ ಸಂಸ್ಕøತಿ, ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಳೆ ಬೀಳುವ ರಾಷ್ಟ್ರಗಳ ಪಟ್ಟಿ ಮಾಡಿದರೆ ಭಾರತ ಎರಡನೇ ಸ್ಥಾನ ಪಡೆದಿದೆ. ಭಾರತದಲ್ಲಿ ಸರಾಸರಿ 117 ಸೆ.ಮೀ ಮಳೆ ಬೀಳುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದಕ್ಕೆ ಕಾರಣ ನಾವೇ. ನೀರಿನ ಬಗ್ಗೆ ಸರಿಯಾದ ಅರಿವು ಹಾಗೂ ನೀರನ್ನು ನಾವು ಹೇಗೆ ಬಳಸಬೇಕು ಎಂಬುವುದನ್ನು ತಿಳಿದುಕೊಳ್ಳಬೇಕು ಎಂದರು. ಭೂಮಿಗೆ ಬೀಳುವ ನೀರನ್ನು ಇತರ ಕಡೆ ಹರಿಯಲು ಬಿಡದೆ, ಬಿದ್ದ ಕಡೆ ಇಂಗಿಸಿದರೆ ನಾವು ಸಂಪೂರ್ಣವಾಗಿ ಮಳೆ ನೀರನ್ನು ಪಡೆದುಕೊಳ್ಳಬಹುದು.

    ನದಿಗಳು ನೈರ್ಮಲ್ಯದ ಹಾಗೂ ಶುದ್ದತೆಯ ಸಂಕೇತ , ಯಾವುದಾದರೂ ಊರಿಗೆ ಹೋದರೆ ಅಲ್ಲಿ ಹರಿಯುವ ತೊರೆಯ ನೀರಿನ ಶುದ್ದತೆಯನ್ನು ನೋಡಿ ಬರುವ ಊರು ಹೇಗಿದೆ ಎಂಬುವುದನ್ನು ಊಹಿಸಿಕೊಳ್ಳಬಹುದು. ಇತಿಹಾಸವನ್ನು ನೋಡಿದರೆ ಅತೀ ಹೆಚ್ಚು ಆಕ್ರಮಣ ಮಾಡಿದುದಕ್ಕೆ ಕಾರಣ ಕೇವಲ ಅಲ್ಲಿರುವ ನೀರಿನ ಸಂಪನ್ಮೂಲಗಳಿಗಾಗಿಯೇ. ಇತ್ತೀಚಿನ ದಿನಗಳಲ್ಲಿ ನೀರು ಹಂಚಿಕೆ ವಿಷಯದಲ್ಲಿ ಕೂಡ ದೇಶದಿಂದ ದೇಶಕ್ಕೆ ಜಗಳ, ದ್ವೇಷವಿರುವುದನ್ನು ನಾವು ಕಾಣಬಹುಹುದು.

    ದೇಶದಲ್ಲಿ ಒಟ್ಟು 2100ಕ್ಕೂ ಮಿಕ್ಕಿ ನದಿಗಳವೆ. 15 ಸಾವಿರ ಹಿಮನದಿಗಳಿವೆ, 13 ಲಕ್ಷ ಮಾನವ ನಿರ್ಮಿತ ಕೆರೆಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ನೀರಿನ ಮೂಲಗಳು ಹದಗೆಟ್ಟು ಹೋಗುತ್ತಿವೆ. ಗಂಗಾ ನದಿಯಂತಹ ನದಿಗಳಲ್ಲಿ ವರ್ಷದಲ್ಲಿ 40 ಸಾವಿರಕ್ಕೂ ಹೆಚ್ಚು ಅರ್ಧ ಬೆಂದ ಹೆಣಗಳನ್ನು ನೀರಲ್ಲಿ ಹಾಕಿ ನೀರು ಮಲಿನವಾಗುತ್ತಿದೆ. ಕೆರೆಗಳಿದ್ದ ಸ್ಥಳದಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು, ಬಸ್‍ಸ್ಟಾಂಡ್‍ಗಳು ನಿರ್ಮಾಣಗೊಳ್ಳುತ್ತಿದೆ. ನೀರಿಗಾಗಿ ಹಲವಾರು ಬುಸಿನೆಸ್‍ಗಳು ಶುರು ಆಗಿದೆ. ಬಾಟಲಿಗಳಲ್ಲಿ ನೀರು, ಎ.ಟಿ.ಎಂ ನೀರು ಹೀಗೆ ನೀರನ್ನು ದುಡ್ಡು ಕೊಟ್ಟು ತೆಗೆದುಕೊಳ್ಳುವ ಮಾನಸಿಕತೆ ನಮ್ಮಲ್ಲಿ ನಿರ್ಮಾಣವಾಗಿದೆ.

    ಎರಡು ದಶಕಗಳಲ್ಲಿ ಸುಮಾರು 2,97,000 ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲೆಯಾಗಿವೆ. ಆದರೆ ಈ ಆತ್ಮಹತ್ಯೆಗೆ ಕಾರಣ ಮಳೆಯ ಸಮಸ್ಯೆ. ಮಹಾತ್ಮ ಗಾಂಧಿಜಿಯವರು ದೇಶದ ಅಭಿವೃದ್ಧಿ ಕೃಷಿ ನೀತಿಯಿಂದ ಆಗಬೇಕು ಎಂದು ಬಯಸಿದ್ದರು. ಆದರೆ ಇಂದು ಕೈಗಾರಿಕಾ ನೀತಿಯಿಂದ ದೇಶದ ಅಭಿವೃದ್ಧಿಯಾಗುತ್ತಿದೆ. ಅತೀ ಹೆಚ್ಚು ಜನರು ನಗರವಾಸಿಗಳಾಗುತಿದ್ದಾರೆ ಎಂದರು.

    ಒಟ್ಟಿನಲ್ಲಿ ನೀರನ್ನು ಮುಂದಿನ ಪೀಳಿಗೆಗೂ ರಕ್ಷಿಸಿಡಬೇಕಾದದು ನಮ್ಮ ಕರ್ತವ್ಯ. ದೇಶದಲ್ಲಿ ಶೇ 68ರಷ್ಟು ಭಾಗ ಕ್ಷಾಮ ಪೀಡಿತರಾಗಿದ್ದಾರೆ. ಅಂತರ್ಜಲದ ಅತೀ ಬಳಕೆಯಿಂದ ಇಂದು ಆರ್ಶೆನಿಕ್ ಮುಂತಾದ ಕಾಯಿಲೆಗಳು ಹರಡುತ್ತಿದೆ. ನಮಗೆಷ್ಟು ನೀರಿನ ಅಗತ್ಯವಿದೆಯೋ ಅಷ್ಟೇ ಬಳಸಿಕೊಳ್ಳಬೇಕು ಎಂದರು.

    ಕಾರ್ಯಕ್ರಮದಲ್ಲಿ ಹಿರಿಯ ಭೂ ವಿಜ್ಞಾನಿ ಡಾ.ಎಂ ದಿನಕರ ಶೆಟ್ಟಿ ಸ್ವಾಗತಿಸಿದರು. ಪ್ರಗ್ನೇಶ್ ಕುಮಾರ್ ವಂದಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply