Connect with us

    LATEST NEWS

    ಲಿಂಗತ್ವ ಅಲ್ಪ ಸಂಖ್ಯಾತರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಒದಗಿಸಿದ ಉಡುಪಿ ಜಿಲ್ಲಾಧಿಕಾರಿ

    ಉಡುಪಿ, ಮಾರ್ಚ್ 21 : ಲಿಂಗತ್ವ ಅಲ್ಪ ಸಂಖ್ಯಾತರು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯುವ ಕುರಿತಂತೆ ಅವರ ಗುರುತಿನ ಬಗ್ಗೆ ದೃಡೀಕರಿಸಲು ಅತ್ಯಂತ ಅಗತ್ಯವಾಗಿದ್ದ ಟ್ರಾನ್ಸ್ಜೆಂಡರ್ ಕಾರ್ಡ್ಗಳನ್ನು ಪಡೆಯಲು ಅನುಭವಿಸುತ್ತಿದ್ದ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಸ್ಥಳದಲ್ಲಿಯೇ ಸದ್ರಿ ಕಾಡ್ ನೀಡುವ ಕುರಿತು ಅರ್ಜಿಗಳನ್ನು ಅವರಿಗೆ ನೀಡಿ, ತಕ್ಷಣವೇ ನೊಂದಣಿ ಮಾಡಿಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ , ಲಿಂಗತ್ವ ಅಲ್ಪ ಸಂಖ್ಯಾತರ ಬಹುಕಾಲದ ಮತ್ತು ಅತ್ಯಂತ ಪ್ರಮುಖ ಸಮಸ್ಯೆಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿದರು.


    ಅವರು ಮಂಗಳವಾರ, ಬ್ರಹ್ಮಗಿರಿಯ ಬಾಲಭವನದಲ್ಲಿ , ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ (ರಿ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ನಗರ ಹಾಗೂ ಗ್ರಾಮೀಣ ಅಭಿವೃದ್ಧಿಗಾಗಿ ಸಮೂಹ ಸಂಸ್ಥೆ (ಗಾರ್ಡ್), ಆಶ್ರಯ ಸಮುದಾಯ ಸಂಘಟನೆ, ಲಯನ್ಸ್ ಕ್ಲಬ್ ಬನ್ನಂಜೆ ಇವರ ಸಂಯುಕ್ತ ಆಶ್ರಯದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಮತ್ತು ದಮನಿತ ಮಹಿಳೆಯರ ಸಮುದಾಯ ಸಂಗಮ ಕಾರ್ಯಕ್ರಮದಲ್ಲಿ , ಲಿಂಗತ್ವ ಅಲ್ಪಸಂಖ್ಯಾತ ಮತ್ತು ದಮನಿತ ಮಹಿಳೆಯರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಸಂವಿಧಾನವು ಪ್ರತಿಯೊಬ್ಬರೂ ಗೌರವಯುತವಾಗಿ ಮತ್ತು ಸ್ವಾಭಿಮಾನದಿಂದ ಬದುಕುವ ಹಕ್ಕು ನೀಡಿದ್ದು, ಲಿಂಗತ್ವ ಅಲ್ಪ ಸಂಖ್ಯಾತರೂ ಸಹ ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರೊಂದಿಗೆ ಬದುಕಲು ಅಗತ್ಯವಿರುವ ಎಲ್ಲಾ ಅವಕಾಶಗಳು ಇವೆ. ಜಿಲ್ಲಾಡಳಿತದ ವತಿಯಿಂದ ಅದಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಇವರು ಆರ್ಥಿಕವಾಗಿ ಸ್ವಾವಲಂಬಿಯಾಗಲು ವಿವಿಧ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಅಗತ್ಯವಿರುವ ಅನುದಾನ ಬಿಡುಗಡೆಗೆ ಈಗಾಗಲೇ ಪತ್ರ ಬರೆದಿದ್ದು ಶೀಘ್ರದಲ್ಲಿ ಇದರ ಸೌಲಭ್ಯ ದೊರೆಯಲಿದೆ ಎಂದರು.


    ಲಿಂಗತ್ವ ಅಲ್ಪಸಂಖ್ಯಾತರು ಸೂಕ್ಷ್ಮ ಸಮುದಾಯಕ್ಕೆ ಸೇರಿದ್ದು, ಅಧಿಕಾರಿಗಳು ಇವರ ಸೂಕ್ಷ್ಮತೆಯನ್ನು ಅರ್ಥಮಾಡಿಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದ ಜಿಲ್ಲಾಧಿಕಾರಿಗಳು, ಈ ಸಮುದಾಯವದರಿಗೆ ಆಧಾರ್ ಕಾರ್ಡ್ ನಲ್ಲಿ ಆಗಬೇಕಿರುವ ಅಗತ್ಯ ಬದಲಾವಣೆಗಳ ಕುರಿತಂತೆ ಅವರಿಗೆ ಪ್ರತ್ಯೇಕವಾಗಿ ಶಿಬಿರ ಆಯೋಜಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಿಕೊಡುವಂತೆ ಮತ್ತು ಪಿಂಚಣಿ ಸೌಲಭ್ಯ ಪಡೆಯದೇ ಇರುವವರನ್ನು ಗುರುತಿಸಿ ಪಿಂಚಣಿ ಸೌಲಭ್ಯ ಒದಗಿಸುವಂತೆ ಹಾಗೂ ಯಾವುದೇ ಸಂದರ್ಭದಲ್ಲಿ ಅವರ ಗೌಪ್ಯತೆಯ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಟ್ರಾನ್ಸ್ಜೆಂಡರ್ ಕಾರ್ಡ್ ನೀಡುವ ಕುರಿತಂತೆ ಜಿಲ್ಲಾಧಿಕಾರಿ ಅವರ ಸೂಚನೆ ಮೇರೆಗೆ , ಬ್ರಹ್ಮಗಿರಿಯ ಬಾಲಭವನದಲ್ಲಿ ಕೂಡಲೇ ವಿಶೇಷ ನೊಂದಣಿ ಶಿಬಿರ ಆಯೋಜಿಸಿ, ಸುಮಾರು 20 ಮಂದಿಯ ನೊಂದಣಿಯನ್ನು ಮಾಡಿ, ಗುರುತಿನ ಚೀಟಿ ನೀಡುವ ಮುಂದಿನ ಕ್ರಮಕ್ಕೆ ಸಲ್ಲಿಸಲಾಯಿತು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ ಮಾತನಾಡಿ,ಜಿಲ್ಲೆಯ ಲಿಂಗತ್ವ ಅಲ್ಪಸಂಖ್ಯಾತರಿಗೆ 41 ಮನೆಗಳು ಮಂಜೂರಾಗಿದ್ದು, ಶೀಘ್ರದಲ್ಲಿ ಅವುಗಳ ವಿತರಣೆ ನಡೆಯಲಿದೆ. ಆರ್ಥಿಕ ಚಟುವಟಿಕೆಗಳನ್ನು ನಡೆಸಲು 5 ಲಕ್ಷ ರೂ ನೆರವು ನೀಡುವ ಕುರಿತ ಪ್ರಸ್ತಾವನೆಯಲ್ಲಿ ಸಲ್ಲಿಸಲಾಗಿದೆ. ಸ್ವ ಸಹಾಯಕ ಸಂಘಗಳನ್ನು ಸ್ಥಾಪಿಸಿಕೊಂಡಲ್ಲಿ ಗರಿಷ್ಠ ಆರ್ಥಿಕ ನೆರವು ಪಡೆಯಲು ಸಾಧ್ಯವಿದ್ದು, ಸಮುದಾಯದವರು ಸಂಘಟಿತರಾಗಿ ಸರಕಾರದ ಯೋಜನೆಗಳ ಪ್ರಯೋಜನ ಪಡೆಯುವಂತೆ ತಿಳಿಸಿದರು.
    ಲಿಂಗತ್ವ ಅಲ್ಪಸಂಖ್ಯಾತರ ಪ್ರತಿನಿಧಿ ಸಮೀಕ್ಷಾ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದಲ್ಲಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸರಕಾರದಿಂದ ನೀಡಬೇಕಾದ ಅಗತ್ಯ ನೆರವಿನ ಬಗ್ಗೆ ತಿಳಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply