LATEST NEWS
ಉಡುಪಿ ಕಾಂಗ್ರೇಸ್ ನಲ್ಲಿ ಭಿನ್ನಮತ – ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದ ಟಿಕೆಟ್ ಆಕಾಂಕ್ಷಿ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ
ಉಡುಪಿ ಎಪ್ರಿಲ್ 6: ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ಟಿಕೆಟ್ ಘೋಷಣೆ ಬೆನ್ನಲ್ಲೇ ಇದೀಗ ಭಿನ್ನಮತ ಶುರುವಾಗಿದ್ದು, ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ನಾನು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆ ಯಲ್ಲಿ ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗದವರು ಇಂದು ಸಂಜೆ ನಗರದ ಮಥುರಾ ಛತ್ರದಲ್ಲಿ ನಡೆಸಿದ ಸಭೆಯಲ್ಲಿ ಅವರು ಮಾತನಾಡುತಿದ್ದರು. ಕಾಂಗ್ರೆಸ್‌ನ ಬಿ ಫಾರ್ಮ್ ದೊರೆತರೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ. ಪಕ್ಷವು ಆಗಿರುವ ತಪ್ಪನ್ನು ಸರಿಪಡಿಸಬೇಕು. ನನ್ನನ್ನು ರಾಜಕೀಯಕ್ಕೆ ಕರೆತಂದ ಆಸ್ಕರ್ ಫೆರ್ನಾಂಡಿಸ್ ಇವತ್ತು ಬದುಕಿದ್ದರೆ ನನಗೆ ಟಿಕೆಟ್ ಸಿಗುತ್ತಿತ್ತು ಎಂದು ಬಾವುಕರಾಗಿ ಹೇಳಿದರು.
ಅಭಿಮಾನಿಗಳ ಸಹಕಾರದಿಂದ ಈ ಬಾರಿ ಚುನಾವಣೆ ಸ್ಪರ್ಧಿಸಬೇಕೆಂಬ ನಿರ್ಧಾರ ಮಾಡಿದ್ದೇನೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಮಗೆ ಪಕ್ಷವೇ ದೊಡ್ಡದು. ಆದರೆ ಅನ್ಯಾಯ ಮಾಡಿದಾಗ ನಾವು ತೋರಿಸಿಕೊಡಬೇಕು. ನನ್ನ ಹೋರಾಟವನ್ನು ಮುಂದುವರೆಸುತ್ತೇನೆ. ಕಾಂಗ್ರೆಸ್ ಪಕ್ಷದ ಧ್ವಜ ಇಟ್ಟು ಕೊಂಡೇ ಪ್ರಚಾರಕ್ಕೆ ಹೋಗುತ್ತೇನೆ ಎಂದರು. ನಾನು ಹೋರಾಟ ಮಾಡಿ ಜಯಿಸಿದವನು. ನಾನು ಎಂದಿಗೂ ಎದುರು ಬಾಗಿಲಿನಿಂದ ಹೋಗುವವನೇ ಹೊರತು ಹಿಂದಿನ ಬಾಗಿಲಿನಿಂದ ಹೋಗುವ ವ್ಯಕ್ತಿ ಅಲ್ಲ. 14 ವರ್ಷಗಳ ಕಾಲ ಡಿಕೆಶಿ ಅಭಿಮಾನಿ ಬಳಗದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಕೋಟ್ಯಂತರ ರೂಪಾಯಿ ಸಮಾಜಕ್ಕೆ ಕೊಟ್ಟಿದ್ದೇನೆ. ಈಗ ನನ್ನೊಂದಿಗೆ ಇರುವ ಯುವ ಸಮುದಾಯವೇ ನನಗೆ ದೊಡ್ಡ ಸಂಪತ್ತು ಎಂದು ಅವರು ತಿಳಿಸಿದರು.