Connect with us

    LATEST NEWS

    ಉಡುಪಿ: ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ 24 ಆರೋಪಿಗಳ ಬಂಧನ

    ಉಡುಪಿ, ಮಾರ್ಚ್ 17: ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಕಳೆದ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ 24ಕ್ಕೂ ಅಧಿಕ ಸಂಖ್ಯೆಯ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿರುವ ಉಡುಪಿ ಪೊಲೀಸರು ಅವರನ್ನು ನ್ಯಾಯಾಲಯಗಳಿಗೆ ಹಾಜರು ಪಡಿಸಿದ್ದಾರೆ.

    ಜಿಲ್ಲೆಯಲ್ಲಿ ವಿವಿಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಹಚ್ಚಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೇಂದ್ರ ಹಾಕೆ ಅವರು ವಿಶೇಷ ತಂಡಗಳನ್ನು ರಚಿಸಿದ್ದು, ಈ ತಂಡಗಳು ಸುಮಾರು 15 ದಿನಗಳಲ್ಲಿ ಹೊರ ಜಿಲ್ಲೆ ಹಾಗೂ ಹೊರರಾಜ್ಯಗಳಲ್ಲಿ ಸಂಚರಿಸಿ ಒಟ್ಟು 24ಕ್ಕೂ ಅಧಿಕ ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ಎಸ್ಪಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಈ ಪೈಕಿ ಭಾರತ-ನೇಪಾಳ ಗಡಿ ಪ್ರದೇಶದಲ್ಲಿ ಒಬ್ಬ, ಮಧ್ಯಪ್ರದೇಶದಲ್ಲಿ ಒಬ್ಬ, ಕೇರಳ-3, ಹೊರಜಿಲ್ಲೆಗಳಲ್ಲಿ-4 ಹಾಗೂ ಉಳಿದವರನ್ನು ಜಿಲ್ಲೆಯಲ್ಲಿ ಪತ್ತೆ ಹಚ್ಚಲಾಗಿದೆ. ಇವರಲ್ಲಿ 12 ವರ್ಷಗಳಿಂದ ತಲೆಮರೆಸಿಕೊಂಡವರು-2, 10 ವರ್ಷಗಳಿಂದ ತಲೆಮರೆಸಿಕೊಂಡವರು-2, 7 ವರ್ಷಗಳಿಂದ-2, 6ವರ್ಷಗಳಿಂದ-1, 5ವರ್ಷಗಳಿಂದ ತಲೆಮರೆಸಿಕೊಂಡವರು-2, 4 ವರ್ಷಗಳಿಂದ ತಲೆಮರೆಸಿಕೊಂಡವರು-2, ಮೂರು ವರ್ಷಗಳಿಂದ ತಲೆಮರೆಸಿ ಕೊಂಡವರು-1, ಎರಡು ವರ್ಷಗಳಿಂದ-4 ಹಾಗೂ ಉಳಿದ 8 ಮಂದಿ ಒಂದು ವರ್ಷದಿಂದ ತಲೆಮರೆಸಿ ಕೊಂಡವರಾಗಿದ್ದಾರೆ.

    ತಲೆ ಮರೆಸಿಕೊಂಡವರ ಪೈಕಿ ದರೋಡೆ, ಸರಕಾರಿ ನೌಕರರ ಮೇಲೆ ಹಲ್ಲೆ, ಕಳವು, ಅಪಹರಣ, ಅತ್ಯಾಚಾರ, ಮಾರಾಣಾಂತಿಕ ರಸ್ತೆ ಅಪಘಾತ ಹಾಗೂ ಚೆಕ್ ಅಮಾನ್ಯ ಮುಂತಾದ ಅಪರಾಧ ಪ್ರಕರಣಗಳಲ್ಲಿ ಒಳಗೊಂಡು ನ್ಯಾಯಾಲಕ್ಕೆ ಹಾಜರಾಗದೇ ತಲೆಮರೆಸಿಕೊಂಡ ಆರೋಪಿಗಳು ಇದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

    ತಲೆಮರೆಸಿಕೊಂಡು ಮತ್ತೆ ಬಂಧಿತರಾದ ಪ್ರಮುಖ ಆರೋಪಿಗಳ ವಿವರ:

    ಪ್ರಕಾಶ್  ಪಕೀರಪ್ಪ: ಹೆಬ್ರಿ ಠಾಣೆಯಲ್ಲಿ ವರದಿಯಾದ ದರೋಡೆ ಪ್ರಕರಣದಲ್ಲಿ ಶಿಕ್ಷೆ ಹೊಂದಿ ಕಳೆದ 7 ವರ್ಷ ಗಳಿಂದ ತಲೆಮರೆಸಿಕೊಂಡಿದ್ದ ಅಪರಾಧಿ ಪ್ರಕಾಶ ಅಲಿಯಾಸ್ ಪಕೀರಪ್ಪ ಎಂಬಾತನನ್ನು ಠಾಣಾ ಸಿಬ್ಬಂದಿಗಳು ಕೊಪ್ಪಳ ಜಿಲ್ಲೆಯ ಮಾದನೂರಿನಲ್ಲಿ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

    ಒಲಿವರ್ ಗ್ಲಾಡನ್ ವಿಲ್ಸನ್: ಕಾಪು ಠಾಣೆಯ ಸರಹದ್ದಿನಲ್ಲಿ ವಾಸಿಸುತ್ತಿದ್ದು, ಚೆಕ್ ಅಮಾನ್ಯ ಪ್ರಕರಣದಲ್ಲಿ ಶಿಕ್ಷೆ ಹೊಂದಿ ಕಳೆದ 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಪರಾಧಿ ಒಲಿವರ್ ಗ್ಲಾಡನ್ ವಿಲ್ಸನ್ ಎಂಬಾತನನ್ನು ಠಾಣಾ ಸಿಬ್ಬಂದಿ ಸುಧಾಕರ ಉದ್ಯಾವರ ಬಾಲಾಜಿ ಅಪಾರ್ಟ್‌ಮೆಂಟ್ ಬಳಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

    ರಾಜೀವ ಶೆಟ್ಟಿ: ಬ್ರಹ್ಮಾವರ ಠಾಣೆಯಲ್ಲಿ ವರದಿಯಾದ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿ  ಕಳೆದ 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ರಾಜೀವ ಶೆಟ್ಟಿ ಎಂಬಾತನನ್ನು ಠಾಣಾ ಸಿಬ್ಬಂದಿಗಳು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಬೆಳ್ಳೂರು ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

    ಗುರುಪ್ರಸಾದ್: ಶಿರ್ವಾ ಠಾಣೆಯಲ್ಲಿ ವರದಿಯಾದ ಕನ್ನ ಕಳವು ಪ್ರಕರಣದಲ್ಲಿ ಭಾಗಿಯಾಗಿ ಕಳೆದ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಗುರುಪ್ರಸಾದ್ ಎಂಬಾತನನ್ನು ಠಾಣಾ ಎಎಸ್‌ಐ ಹಾಗೂ ಸಿಬ್ಬಂದಿಗಳು ಮೂಡಬಿದ್ರೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ನ್ಯಾಯಾಲಯವು ಆತನ ಬಂಧನಕ್ಕಾಗಿ ಪ್ರೊಕ್ಷಮೇಷನ್ ಹೊರಡಿಸಿತ್ತು.

    ಉಮರ್: ಶಿರ್ವಾ ಠಾಣೆಯಲ್ಲಿ ವರದಿಯಾದ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಉಮರ್ ಎಂಬಾತನನ್ನು ಠಾಣಾ ಸಿಬ್ಬಂದಿಗಳು ಚಂದ್ರನಗರ, ಕಳತ್ತೂರಿನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ನ್ಯಾಯಾಲಯವು ಆತನ ಬಂಧನಕ್ಕಾಗಿ ಎಲ್‌ಪಿಸಿ ಹೊರಡಿಸಿತ್ತು.

    ಸುದರ್ಶನ್: ಶಿರ್ವಾ ಠಾಣೆಯಲ್ಲಿ ವರದಿಯಾದ ಕನ್ನ ಕಳವು ಪ್ರಕರಣದಲ್ಲಿ ಭಾಗಿಯಾಗಿ ಕಳೆದ 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸುದರ್ಶನ್ ಎಂಬಾತನನ್ನು ಠಾಣಾ ಸಿಬ್ಬಂದಿಗಳು ಬೆಳ್ಳೆ ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

    ಜೀತೇಂದ್ರ ಶಾರ್ಕಿ: ಮಣಿಪಾಲ ಠಾಣೆಯಲ್ಲಿ ವರದಿಯಾದ ಪೋಕ್ಸೋ ರೇಪ್ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 2 ವರ್ಷಗಳಿಂದ ತಲೆಮರೆಸಿ ಕೊಂಡಿದ್ದ ಆರೋಪಿ ಜೀತೇಂದ್ರ ಶಾರ್ಕಿ, ನೇಪಾಳ ಎಂಬಾತನನ್ನು ಭಾರತ ನೇಪಾಳ ಗಡಿಭಾಗದ ಉತ್ತರಾಖಂಡದ ಗಡಿಕೋಟ್ ಎಂಬಲ್ಲಿ ಠಾಣಾ ಪಿಎಸ್‌ಐ ಅಬ್ದುಲ್ ಖಾದರ್, ನಿಧಿ ಬಿ.ಎನ್. ಹಾಗೂ ಸಿಬ್ಬಂದಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

    ಬಾಬು: ಬೈಂದೂರು ಠಾಣೆಯಲ್ಲಿ ವರದಿಯಾದ ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 6 ವರ್ಷಗಳಿಂದ ತಲೆಮರೆಸಿ ಕೊಂಡಿದ್ದ ಆರೋಪಿ ಬಾಬು ಎಂಬಾತನನ್ನು ಕೇರಳದ ಪಾಲಕ್ಕಾಡ್ ಎಂಬಲ್ಲಿ ಠಾಣಾ ಎ.ಎಸ್.ಐ. ಹರೀಶ್ ಎಸ್. ಮತ್ತು ಸಿಬ್ಬಂದಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನನ್ನು ಸೂಕ್ತ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.

    ಕೃಷ್ಣನ್ ಕುಟ್ಟಿ: ಬೈಂದೂರು ಠಾಣೆಯಲ್ಲಿ ವರದಿಯಾದ ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೃಷ್ಣನ್ ಕುಟ್ಟಿ ಎಂಬಾತನನ್ನು ಕೇರಳದ ಕೊಟ್ಟಾರಕೆರ ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.  ನ್ಯಾಯಾಲಯವು ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.

    ಸಹದೇವಾ: ಬೈಂದೂರು ಠಾಣೆಯಲ್ಲಿ ವರದಿಯಾದ ಕಳವು ಪ್ರಕರಣದಲ್ಲಿ ಭಾಗಿಯಾಗಿ ಕಳೆದ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸಹದೇವ ಎಂಬಾತನನ್ನು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ನ್ಯಾಸರ್ಗಿ ಎಂಬಲ್ಲಿ ಠಾಣಾ ಸಿಬ್ಬಂದಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

    ಸುನಿಲ್ ಕುಮಾರ್: ಬೈಂದೂರು ಠಾಣೆಯಲ್ಲಿ ವರದಿಯಾದ ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸುನಿಲ್ ಕುಮಾರ್, ರಾಜಸ್ಥಾನ ಎಂಬಾತನನ್ನು ಕುಂದಾಪುರದ ಮಂಗಳಪಾಂಡೆ ರಸ್ತೆ ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗಿದೆ. ನ್ಯಾಯಾಲಯವು ಆತನನ್ನು ಸೂಕ್ತ ಜಾಮೀನಿನ ಮೇಲೆ ಬಿಡುಗಡೆ ಮಾಡಿರುತ್ತದೆ.

    ಶೇಷಮನಿ ನಾಮದೇವ್: ಕುಂದಾಪುರ ಸಂಚಾರ ಠಾಣೆಯಲ್ಲಿ ವರದಿಯಾದ ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಧ್ಯಪ್ರದೇಶದ ವಾಸಿ ಶೇಷಮನಿ ನಾಮದೇವ್ ಮಧ್ಯಪ್ರದೇಶದ ದಿಯೋತಲಾಬ್ ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆತನಿಗೆ ದಂಡ ವಿಧಿಸಿ, ಪ್ರಕರಣವನ್ನು ಮುಕ್ತಾಯಗೊಳಿಸಿದೆ.

    ಕೊಲ್ಲೂರು ಠಾಣೆಯಲ್ಲಿ ವರದಿಯಾದ ಪ್ರಕರಣವೊಂದರಲ್ಲಿ ಭಾಗಿಯಾಗಿ ಕಳೆದ 12 ವರ್ಷಗಳಿಂದ ತಲೆಮರೆಸಿ ಕೊಂಡಿದ್ದ ಆರೋಪಿತೆ ನಿಶಿ ಎಂಬಾಕೆಯನ್ನು ಠಾಣಾ ಸಿಬ್ಬಂದಿ ವೆಂಕಟೇಶ್ ಇವರು ಕೇರಳ ರಾಜ್ಯದ ತಳಿಪರಾಂಬ ಎಂಬಲ್ಲಿ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ.

    ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸ್ ಅಧಿಕಾರಿ- ಸಿಬ್ಬಂದಿಗಳನ್ನು ಪೊಲೀಸ್ ಅಧೀಕ್ಷಕರಾದ ಅಕ್ಷಯ್ ಎಂ. ಹೆಚ್. ಅಭಿನಂದಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply