LATEST NEWS
ಉಡುಪಿ ಜಿಲ್ಲೆಯ ಎಲ್ಲಾ ಕ್ವಾರಂಟೈನ್ ಕೇಂದ್ರ ಭರ್ತಿಯಾಗಿದೆ ಉಡುಪಿ ಜಿಲ್ಲಾಧಿಕಾರಿ
ಉಡುಪಿ ಜಿಲ್ಲೆಯ ಎಲ್ಲಾ ಕ್ವಾರಂಟೈನ್ ಕೇಂದ್ರ ಭರ್ತಿಯಾಗಿದೆ ಉಡುಪಿ ಜಿಲ್ಲಾಧಿಕಾರಿ
ಉಡುಪಿ ಮೇ.23: ಉಡುಪಿ ಜಿಲ್ಲೆಯ ಎಲ್ಲಾ ಕ್ವಾರಂಟೈನ್ ಕೇಂದ್ರಗಳು ಭರ್ತಿಯಾಗಿದ್ದು ಸದ್ಯ ಹೊರರಾಜ್ಯದಿಂದ ಬರುವವರಿಗೆ ಯಾವುದೇ ಪಾಸ್ ಮಂಜೂರ ಮಾಡುತ್ತಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ನಮ್ಮ ಜಿಲ್ಲೆಗೆ ಹೊರಜಿಲ್ಲೆಗಳಿಂದ 8010 ಜನ ಬಂದಿದ್ದಾರೆ. ಮಹಾರಾಷ್ಟ್ರ ರಾಜ್ಯದಿಂದಲೇ 7226 ಮಂದಿ ವಾಪಾಸಾಗಿದ್ದಾರೆ. ಈ ಹಿನ್ನಲೆ ಈಗಾಗಲೇ ಜಿಲ್ಲೆಯಲ್ಲಿರುವ ಕ್ವಾರಂಟೈನ್ ಸೆಂಟರ್ ಗಳು ಬಹುತೇಕ ಭರ್ತಿಯಾಗಿವೆ. ಆದ್ದರಿಂದ ಸದ್ಯ ಹೊರರಾಜ್ಯದಿಂದ ಬರುವವರಿಗೆ ಯಾವುದೇ ಪಾಸ್ ಮಂಜೂರು ಮಾಡುತ್ತಿಲ್ಲ ಎಂದು ಜಿಲ್ಲಾಧಿಕಾರಿ ಜಗಧೀಶ್ ತಿಳಿಸಿದ್ದಾರೆ. ಇನ್ನು ಹೊರ ರಾಜ್ಯದವರಿಗೆ ಅವಕಾಶ ನೀಡಲು ಈಗ ಇರುವವರ ಕ್ವಾರಂಟೈನ್ ಅವಧಿ ಮುಗಿದ ನಂತರವಷ್ಟೇ, ಕ್ವಾರಂಟೈನ್ ಸೆಂಟರ್ ಸ್ಯಾನಿಟೈಸ್ ಮಾಡಿದ ಬಳಿಕ ಮುಂದಿನ ತಂಡಕ್ಕೆ ಅವಕಾಶ ನೀಡಲಾಗುವುದು ಎಂದರು.
ಈಗಾಗಲೇ ಜಿಲ್ಲೆಗೆ ಹೊರಾಜ್ಯದಿಂದ ಬಂದ 3600 ಜನರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ.ರಾಜ್ಯದಲ್ಲಿ ಕರೊನಾ ಪರೀಕ್ಷೆಗೆ ಬೇಕಾದಷ್ಟು ಲ್ಯಾಬ್ ಕೆಪ್ಯಾಸಿಟಿ ಜಿಲ್ಲೆಯಲ್ಲಿಲ್ಲ. 14 ದಿನಗಳೊಳಗೆ ಕ್ವಾರಂಟೈನ್ ಅವಧಿ ಮುಗಿಯೋದಿಲ್ಲ. ಅಷ್ಟರೊಳಗೆ ಎಲ್ಲರ ಪರೀಕ್ಷಾ ವರದಿ ಬರುವುದಿಲ್ಲ. ಕ್ವಾರಂಟೈನ್ ಸೆಂಟರ್ ನಲ್ಲಿ ಇರುವವರು ಜಿಲ್ಲಾಡಳಿತದೊಂದಿಗೆ ಸಹಕರಿಸಿ ಎಂದ ಅವರು, ಈಗಾಗಲೇ ಜಿಲ್ಲಾ ಕೇಂದ್ರದಲ್ಲಿ ಮತ್ತೊಂದು ಕೋವಿಡ್ ಆಸ್ಪತ್ರೆ ಸಿದ್ದವಾಗಿದ್ದು, ಎಸ್ ಡಿ ಎಂ ಕಾಲೇಜು ಆಸ್ಪತ್ರೆಯಲ್ಲಿ 100 ಬೆಡ್ ವ್ಯವಸ್ಥೆ ಮಾಡಲಾಗುವುದು. ಕೋವಿಡ್ ರೋಗಿಗಳ ಚಿಕಿತ್ಸೆಗೆ ಜಿಲ್ಲೆಯಲ್ಲಿ ಒಟ್ಟು 440 ಬೆಡ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಕುಂದಾಪುರ ತಾಲೂಕು ಕೇಂದ್ರದಲ್ಲಿ 120 ಬೆಡ್, ಕಾರ್ಕಳ ತಾಲೂಕಿನಲ್ಲಿ ನೂರು ಬೆಡ್ ನ ಆಸ್ಪತ್ರೆ ಸಿದ್ದವಾಗಿದೆ ಎಂದು ಮಾಹಿತಿ ನೀಡಿದರು.