LATEST NEWS
ಉಡುಪಿ: 8 ವರ್ಷದ ಮಗನ ಸಮಯ ಪ್ರಜ್ಞೆ ಉಳಿಸಿತು ಅಪ್ಪನ ಜೀವ..!
ಉಡುಪಿ: ಮನೆಯಲ್ಲಿದ್ದ 8 ವರ್ಷದ ಮಗನ ಸಮಯ ಪ್ರಜ್ಞೆ ತಂದೆಯ ಪ್ರಾಣ ಉಳಿಸಿದ ಘಟನೆ ಕೃಷ್ಣ ನಗರಿ ಉಡುಪಿಯಲ್ಲಿ ನಡೆದಿದೆ.
ತಂದೆ ಮನೆಯಲ್ಲಿ ಕುಸಿದುಬಿದ್ದು ಅಸಹಾಯಕ ಸ್ಥಿತಿಯಲ್ಲಿದ್ದಾಗ, ಎಂಟು ವರ್ಷದ ಮಗನ ಸಮಯ ಪ್ರಜ್ಞೆಯಿಂದಾಗಿ ತಂದೆಯು ರಕ್ಷಿಸಲ್ಪಟ್ಟ ಘಟನೆ ಜಿಲ್ಲೆಯ ದೊಡ್ಡಣಗುಡ್ಡೆಯಲ್ಲಿ ನಡೆದಿದೆ.
ತಂದೆ ಮತ್ತು ಪುಟ್ಟ ಮಗ ಇರ್ವರು ವಿದ್ಯುತ್ ಸಂಪರ್ಕವಿಲ್ಲದ ಮನೆಯಲ್ಲಿ ವಾಸವಾಗಿದ್ದರು. ಹೀಗಿರುವಾಗ ಸೋಮವಾರ ತಡ ಸಂಜೆ ತಂದೆ ಅಜಯ್ ಕುಸಿದುಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ತಕ್ಷಣ ತಂದೆಯ ಅಸಹಾಯಕತೆಯನ್ನು ಗಮನಿಸಿದ ಮಗ ದಿಯಾನ್ ಸಮಯಪ್ರಜ್ಞೆ ಮೆರೆದು ಕತ್ತಲಲ್ಲಿಯೇ ನೆರೆಮನೆಗೆ ಹೋಗಿ ವಿಷಯ ಮುಟ್ಟಿಸಿದ್ದಾನೆ. ಕೂಡಲೇ ಮನೆಗೆ ಧಾವಿಸಿ ಬಂದು ನೆರೆಮನೆಯವರು ಸತ್ಯಸಂಗತಿ ತಿಳಿದುಕೊಂಡು ಸಮಾಜಸೇವಕ ನಿತ್ಯಾನಂದ ಒಳಕಾಡುವರಿಗೆ ನೆರವಿಗೆ ಬರುವಂತೆ ಕರೆ ನೀಡಿದರು. ತಕ್ಷಣ ಸ್ಪಂದಿಸಿದ ಒಳಕಾಡುವರು ತಂದೆ ಅಜಯನನ್ನು ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಯಾಚರಣೆಗೆ ಸಂದರ್ಭ ಸ್ಥಳೀಯ ಸಮಾಜಸೇವಕಿ ಜ್ಯೋತಿ ನೆರವಿಗೆ ಬಂದಿದ್ದು, ಬಾಲಕ ದಿಯಾನನಿಗೂ ಮನೆಯಲ್ಲಿ ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾರೆ. ಕರಂಬಳ್ಳಿ ಹಿರಿಯ ಪ್ರಾಥಮಿಕ ಶಾಲೆಯ 3 ನೇ ತರಗತಿ ವಿದ್ಯಾರ್ಥಿ ದಿಯಾನನ ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಯಿತು.
You must be logged in to post a comment Login