Connect with us

    KARNATAKA

    ಗದಗ ನಾಲ್ವರ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ , ತಂದೆ, ತಾಯಿ ಕೊಲೆಗೆ ಮಗನಿಂದಲೇ ಸುಪಾರಿ, ಗುರಿ ತಪ್ಪಿ ಸಂಬಂಧಿಕರನ್ನು ಮುಗಿಸಿದ್ದ ಕಿಲ್ಲರ್ ಗ್ಯಾಂಗ್..!

    ಗದಗ: ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ ಪ್ರಕರಣವನ್ನು ಮೂರೇ ದಿನಗಳಲ್ಲಿ ಪೊಲೀಸರು ಭೇದಿಸಿದ್ದು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಮನೆಮಂದಿಯ ಹತ್ಯೆಗೆ ನಗರಸಭೆ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಪ್ರಕಾಶ್ ಬಾಕಳೆಯವರ ಮೊದಲ ಪತ್ನಿಯ ಹಿರಿಯ ಪುತ್ರ ವಿನಾಯಕ್ ಬಾಕಳೆ ಸುಫಾರಿ ನೀಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಎಸ್ಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉತ್ತರ ವಲಯದ ಐಜಿಪಿ ವಿಕಾಸ್ ಕುಮಾರ್ ವಿಕಾಸ ಪ್ರಕರಣಕ್ಕೆ ಸಂಬಂಧಿಸಿ ಪ್ರಕಾಶ್ ಬಾಕಳೆಯವರ ಪುತ್ರ ವಿನಾಯಕ್ ಬಾಕಳೆ(31), ಗದಗ ನಿವಾಸಿಗಳಾದ ಫೈರೋಝ್ ಖಾಜಿ (29), ಜಿಶಾನ್ ಖಾಜಿ (24), ಮಹಾರಾಷ್ಟ್ರದ ಮೀರಜ್ ನ ನಿವಾಸಿಗಳಾದ ಸಾಹಿಲ್ ಖಾಜಿ (19) ಮತ್ತು ಸುಹೈಲ್ ಖಾಜಿ (18), ಸುಲ್ತಾನ್ ಶೇಖ್ (23), ಮಹೇಶ ಜಗನ್ನಾಥ ಸಾಳೊಂಕೆ (21) ಹಾಗೂ ವಾಹಿದ್ ಬೇಪಾರಿ (21) ಎಂಬವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಆರು ತಿಂಗಳ ಹಿಂದೆ ವಿನಾಯಕ ಹಾಗೂ ಅವರ ತಂದೆ ಪ್ರಕಾಶ ಬಾಕಳೆ ಮಧ್ಯೆ ಆಸ್ತಿ ವಿಚಾರವಾಗಿ ಮನಸ್ತಾಪ ಉಂಟಾಗಿತ್ತು. ತನ್ನ ಅನುಮತಿ ಇಲ್ಲದೆ ಆಸ್ತಿ ಮಾರಾಟ ಮಾಡಬಾರದು ಎಂದು ವಿನಾಯಕನಿಗೆ ತಂದೆ ಪ್ರಕಾಶ ಬಾಕಳೆ ಎಚ್ಚರಿಕೆ ನೀಡಿದ್ದರು. ಇದರಿಂದ ಕೋಪಗೊಂಡಿದ್ದ ವಿನಾಯಕ ಬಾಕಳೆಯು ಪ್ರಕಾಶ್ ಬಾಕಳೆ, ಮಲತಾಯಿ ಸುನಂದಾ ಬಾಕಳೆ ಮತ್ತು ಅವರ ಪುತ್ರ ಕಾರ್ತಿಕ್ ಬಾಕಳೆ ಕೊಲೆಗೆ ಸಂಚು ರೂಪಿಸಿದ್ದ. ಇದಕ್ಕಾಗಿ ಫೈರೋಝ್ ಖಾಜಿಗೆ ಸುಪಾರಿ ನೀಡಿದ್ದು, 65 ಲಕ್ಷ ರೂ.ಗೆ ಮಾತುಕತೆ ನಡೆಸಿ ಮುಂಗಡವಾಗಿ 2 ಲಕ್ಷ ರೂ. ನೀಡಿದ್ದ. ಅದರಂತೆ ದುಷ್ಕರ್ಮಿಗಳು ಎ.19ರಂದು ಬೆಳಗಿನ ಜಾವ ಪ್ರಕಾಶ್ ಬಾಕಳೆಯ ಮನೆಗೆ ನುಗ್ಗಿ ಕಾರ್ತಿಕ್ ಬಾಕಳೆ (28), ಸಂಬಂಧಿಕ ಪರಶುರಾಮ್ ಹಾದಿಮನಿ (55) ಪತ್ನಿ ಲಕ್ಷ್ಮೀ ಹಾದಿಮನಿ (45) ಹಾಗೂ ಪುತ್ರಿ ಆಕಾಂಕ್ಷಾ (16)ಳನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು. ಕಳೆದ ಮೂರು ದಿನಗಳಿಂದ ಕಾರ್ಯಾಚರಣೆಗೆ ಇಳಿದಿದ್ದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ನೇತೃತ್ವದಲ್ಲಿನ ಗದಗ ಹೆಚ್ಚುವರಿ ಎಸ್ಪಿ ಎಮ್. ಬಿ. ಸಂಕದ, ಧಾರವಾಡ ಹೆಚ್ಚುವರಿ ಆಯುಕ್ತ ನಾರಾಯಣ ಬರಮನಿ, ಬಾಗಲಕೋಟ ಹೆಚ್ಚುವರಿ ಎಸ್ಪಿ ಹಾಗೂ ಗದಗ ಡಿವೈಎಸ್ಪಿ ಜೆ.ಎಚ್. ಇನಾಮದಾರ ನೇತೃತ್ವದ ಪೊಲೀಸರ ತಂಡ ಕೃತ್ಯ ನಡೆದ 72 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಕೊಲೆಯ ಬಳಿಕ ಪರಾರಿಯಾಗಲು ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಡಿಜಿ, ಐಜಿಪಿ ಅಲೋಕ್ ಮೋಹನ್ 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಿರುವುದಾಗಿ ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply