Connect with us

    LATEST NEWS

    ಕೇರಳದಲ್ಲಿ ಚಿತ್ರ ನಿರ್ಮಾಪಕನ ಮನೆಯಿಂದ 1 ಕೋಟಿಯ ಚಿನ್ನ ಕದ್ದವ ಕುಂದಾಪುರದಲ್ಲಿ ಬಲೆಗೆ..!

    ಉಡುಪಿ : ಕೇರಳದ ಚಿತ್ರ ನಿರ್ಮಾಪಕರೊಬ್ಬರ ಮನೆಯಿಂದ ಒಂದು ಕೋಟಿ ಮೌಲ್ಯದ ಚಿನ್ನಾಭರಣ ಕದ್ದ ಆರೋಪಿ ಉಡುಪಿ ಕುಂದಾಪುರದಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ.

    ಬಿಹಾರಕ್ಕೆ ಚಿನ್ನ ಸಾಗಿಸುತ್ತಿದ್ದ ಈ ಅಂತರ್ ರಾಜ್ಯ ಕಳವು ಆರೋಪಿಯೋರ್ವನನ್ನು ಕೋಟ ಪೊಲೀಸರು ಕ್ಷಿಪ್ರ ಕಾರ್ಯಚರಣೆಯಲ್ಲಿ ಬಂಧಿಸಿದ್ದಾರೆ. ಬಿಹಾರ ರಾಜ್ಯದ ಸೀತಾಮರಿ ಜಿಲ್ಲೆಯ ನಿವಾಸಿ ಮುಹಮ್ಮದ್ ಇರ್ಫಾನ್ (35) ಬಂಧಿತ ಆರೋಪಿ. ಖಚಿತ ಮಾಹಿತಿಯನ್ನು ಆಧರಿಸಿ ಕೋಟ ಪೊಲೀಸರು ಮೂರ್ಕೈ ಸಮೀಪ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಲಯಾಳಂ ಚಲನಚಿತ್ರ ನಿರ್ಮಾಪಕ ಜೋಶಿಯವರ ಕೊಚ್ಚಿ ಪನಂಪಲ್ಲಿಯ ಮನೆಯಿಂದ ಎ.20ರಂದು ಮುಂಜಾನೆ ಕಳ್ಳತನ ನಡೆದಿತ್ತು. ಮನೆಯ ಅಡುಗೆ ಕೋಣೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳ ಕಪಾಟನ್ನು ಒಡೆದು 10 ವಜ್ರದ ಉಂಗುರ, 12 ವಜ್ರದ ಕಿವಿಯೋಲೆ, 2 ಚಿನ್ನದ ಉಂಗುರ, 10 ಚಿನ್ನದ ನೆಕ್ಲೆಸ್, 10 ಚಿನ್ನದ ಬಳೆ, 10 ಕೈಗಡಿಯಾರ ಸಹಿತ 1 ಕೋಟಿ ರೂ. ಮೌಲ್ಯದ 1.2 ಕೆಜಿ ಆಭರಣಗಳನ್ನು ಕಳವುಗೈದು ಪರಾರಿಯಾಗಿದ್ದ. ಈ ನಡುವೆ ಅಪಾರ ಪ್ರಮಾಣದ ಚಿನ್ನಾಭರಣವನ್ನು ಕೇರಳದಿಂದ ಕರ್ನಾಟಕವಾಗಿ ಬಿಹಾರಕ್ಕೆ ಅಕ್ರಮವಾಗಿ ಸಾಗಟ ಮಾಡುತ್ತಿರುವ ಬಗ್ಗೆ ಕೋಟ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಅದರಂತೆ ಕಳೆದ ರಾತ್ರಿ ಕೋಟ ಪೊಲೀಸರು ಕಾರನ್ನು ತಡೆದು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳು ಆರೋಪಿಯ ವಿಚಾರಣೆ ನಡೆಸಿದ್ದು, ಕೇರಳ ಪೊಲೀಸರು ಜಿಲ್ಲೆಗೆ ಆಗಮಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

    ಕಳವು ನಡೆದ ಸಂದರ್ಭ ಚಲನಚಿತ್ರ ನಿರ್ಮಾಪಕ ಜೋಶಿಯವರ ಮನೆಯಲ್ಲಿ ಯಾರೂ ಇಲ್ಲದಿದ್ದ ಕಾರಣ ಕಳ್ಳತನ ಆಗಿರುವ ಕುರಿತು ಅವರಿಗೆ ಮಾಹಿತಿ ಇರಲಿಲ್ಲ. ಹಾಗಾಗಿ ಪೊಲೀಸರಿಗೂ ದೂರು ಬಂದಿರಲಿಲ್ಲ. ಆದರೆ ಶಂಕಿತ ವಾಹನವೊಂದು ರಾಜ್ಯದಲ್ಲಿ ಸಂಚರಿಸಿದ್ದಲ್ಲದೆ ಕರ್ನಾಟಕದತ್ತ ಸಾಗಿದೆ ಎಂಬ ಮಾಹಿತಿ ಅರಿತ ಕೇರಳ ಪೊಲೀಸರು ಆ ಬಗ್ಗೆ ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಕೋಟ ಠಾಣೆಯ ಎಸ್ಸೈ ತೇಜಸ್ವಿ, ಅಪರಾಧ ವಿಭಾಗದ ಎಸ್ಸೈ ಸುಧಾ ಪ್ರಭು ಮತ್ತು ಸಿಬ್ಬಂದಿ ಗೋಪಾಲ ಪೂಜಾರಿ, ಪ್ರಸನ್ನ, ವಿಜಯೇಂದ್ರ ಮೊದಲಾದವರು ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಶಂಕಿತ ಕಾರನ್ನು ತಡೆಯಲು ಯತ್ನಿಸಿದರು.

    ಆದರೆ ಚಾಲಕನು ಕಾರನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಹಿಂಬಾಲಿಸಿದ ಪೊಲೀಸರು ಕೋಟ ಮೂರುಕೈ ಸಮೀಪದಲ್ಲಿ ತಮ್ಮ ವಾಹನವನ್ನು ಅಡ್ಡ ನಿಲ್ಲಿಸಿ ಕಾರನ್ನು ತಡೆದು ವಶಕ್ಕೆ ಪರಿಶೀಲಿಸಿದಾಗ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ. ವಿಚಾರಿಸಿದಾಗ ಆರೋಪಿಯು ಕೇರಳದಲ್ಲಿ ಕಳವು ಕೃತ್ಯ ಎಸಗಿ ಬಿಹಾರಕ್ಕೆ ಪರಾರಿಯಾಗುತ್ತಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply