FILM
ತುಳು ಚಿತ್ರರಂಗದ ಉದಯೋನ್ಮುಖ ನಿರ್ದೇಶಕ ರಘುಶೆಟ್ಟಿ ಇನ್ನಿಲ್ಲ

ಮಂಗಳೂರು ಎಪ್ರಿಲ್ 18: ತುಳು ಚಿತ್ರರಂಗದ ಉದಯೋನ್ಮುಖ ನಿರ್ದೇಶಕ ರಘು ಶೆಟ್ಟಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಗಿತ್ತು. ಹೃದಯಾಘಾತವಾದ ಹಿನ್ನಲೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರಘು ಶೆಟ್ಟಿಯವರು, ಶನಿವಾರ ಸಂಜೆ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ತಮ್ಮ ಮೊದಲ ಸಿನಿಮಾ ‘ಅರ್ಜುನ್ ವೆಡ್ಸ್ ಅಮೃತಾ’ ಮೂಲಕ ಅಸಂಖ್ಯಾತ ಪ್ರೇಮಿಗಳ ಮನಸ್ಸನ್ನು ರಘುಶೆಟ್ಟಿ ಸೆಳೆದಿದ್ದರು. ಅಲ್ಲದೆ ಇದೊಂದು ಫ್ಯಾಮಿಲಿ ಹಿಟ್ ಸಿನಿಮಾವಾಗಿ ಗಮನ ಸೆಳೆದಿತ್ತು. ಈ ಸಿನಿಮಾ ನಿರ್ದೇಶನಕ್ಕೆ ರಘು ಶೆಟ್ಟಿಯವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡಾ ಪಡೆದಿದ್ದರು.

ಈ ಹಿಂದೆ ಉದಯ ಟಿವಿಯಲ್ಲಿ ಉದ್ಯೋಗದಲ್ಲಿದ್ದು, ಬಳಿಕ ತುಳು ಸಿನಿಮಾರಂಗದಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದರು. ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮವನ್ನೂ ನಡೆಸಿದ್ದರು. ಈ ಮಧ್ಯೆ ಕನ್ನಡ ಸಿನಿಮಾ ನಿರ್ದೇಶನದ ತಯಾರಿಯಲ್ಲೂ ಇದ್ದರು. ನಟ ಕೋಮಲ್ ಜೊತೆ ಕನ್ನಡ ಸಿನಿಮಾ ತಯಾರಿಯಲ್ಲಿದ್ದ ರಘು ಶೆಟ್ಟಿ, ಇನ್ನೇನು ಸಿನಿಮಾ ಚಿತ್ರೀಕರಣ ನಡೆಸುವವರಿದ್ದರು. ಈ ಮೂಲಕ ಕೋಸ್ಟಲ್ ವುಡ್ನಿಂದ ಸ್ಯಾಂಡಲ್ ವುಡ್ಗೆ ಪಾದಾರ್ಪಣೆ ಮಾಡುವ ಕನಸಿನಲ್ಲಿದ್ದರು. ಅದರೆ, ಅಷ್ಟರಲ್ಲಾಗಲೇ ಕಾಣದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ತುಳು ಸಿನಿಮಾ ರಂಗದಲ್ಲಿ ಇನ್ನಷ್ಟು ಚಿತ್ರಗಳನ್ನು ಮಾಡುವ ಕನಸಿನಲ್ಲಿದ್ದ ರಘು ಶೆಟ್ಟಿಯವರ ನಿಧನಕ್ಕೆ ತುಳು ಸಿನಿಮಾ ರಂಗ ಕಂಬನಿ ಮಿಡಿದಿದೆ.