LATEST NEWS
ಮಂಗಳಮುಖಿ ಅಥವಾ ಲಿಂಗ ಪರಿವರ್ತನೆ ಆದವರು ಇನ್ನು ಮಹಿಳಾ ಕ್ರಿಕೆಟ್ನಲ್ಲಿ ಆಡುವಂತಿಲ್ಲ!
ಅಹಮದಾಬಾದ್, ನವೆಂಬರ್ 22: ಮಂಗಳಮುಖಿಯರು ಅಥವಾ ಲಿಂಗ ಪರಿವರ್ತನೆ ಆದವರು ಇನ್ನು ಮುಂದೆ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ನಲ್ಲಿ ಆಡುವಂತಿಲ್ಲ ಎಂದು ಐಸಿಸಿ ಮಂಗಳವಾರ ಮಹತ್ವದ ನಿಯಮವನ್ನು ಜಾರಿಗೆ ತಂದಿದೆ.
ಪುರುಷರಾಗಿ ಪ್ರೌಢಾವಸ್ಥೆಗೆ ಬಂದವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಅಥವಾ ಲಿಂಗ ಪರಿವರ್ತನೆಯಾಗಿದ್ದರೂ ಮಹಿಳೆಯರೊಂದಿಗೆ ಕ್ರಿಕೆಟ್ ಆಡುವಂತಿಲ್ಲ. ಆಟಗಾರ್ತಿಯರ ಸುರಕ್ಷತೆ ಮತ್ತು ಮಹಿಳಾ ಕ್ರಿಕೆಟ್ ಸಮಗ್ರತೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಐಸಿಸಿ ತಿಳಿಸಿದೆ.
ಕ್ರೀಡೆಗೆ ಸಂಬಂಧಿಸಿದ ವಿವಿಧ ವ್ಯಕ್ತಿ&ಸಂಸ್ಥೆಗಳ ಜತೆಗೆ 9 ತಿಂಗಳ ಕಾಲ ಸಮಗ್ರ ಚರ್ಚೆ ನಡೆಸಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಹೊಸ ಲಿಂಗ ಅರ್ಹತೆಯ ನಿಯಮಾವಳಿಯನ್ನು ಜಾರಿಗೆ ತರಲು ಐಸಿಸಿ ಮಂಡಳಿ ಸಮ್ಮತಿಸಿದೆ. 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ಗೆ ಟಿ20 ಕ್ರಿಕೆಟ್ ಸೇರ್ಪಡೆಗೊಂಡಿರುವುದು ಕೂಡ ಐಸಿಸಿ ಶೀಘ್ರವಾಗಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲು ಕಾರಣವಾಗಿದೆ ಎನ್ನಲಾಗಿದೆ.
ಕ್ರೀಡೆಯಲ್ಲಿ ಲಿಂಗ ಪರಿವರ್ತಿತರ ಪಾಲ್ಗೊಳ್ಳುವಿಕೆ ಕಳೆದ ಕೆಲ ವರ್ಷಗಳಿಂದ ಅತ್ಯಂತ ಚರ್ಚಾವಸ್ತುವಾಗಿದ್ದು, ಕ್ರಿಕೆಟ್ ಕೂಡ ಈಗ ಒಲಿಂಪಿಕ್ಸ್ ಕ್ರೀಡೆಯಾಗಿರುವುದರಿಂದ ಅದು ಈ ಬಗ್ಗೆ ಸ್ಪಷ್ಟ ನಿರ್ಧಾರವೊಂದನ್ನು ತೆಗೆದುಕೊಳ್ಳುವುದು ಅಗತ್ಯವಾಗಿತ್ತು. ಆದರೆ ದೇಶೀಯ ಕ್ರಿಕೆಟ್ನಲ್ಲಿ ಲಿಂಗ ಪರಿವರ್ತಿತರಿಗೆ ಆಡಲು ಅವಕಾಶ ನೀಡುವ ಅಧಿಕಾರವನ್ನು ಐಸಿಸಿ, ಆಯಾ ದೇಶಗಳಿಗೆ ಬಿಟ್ಟಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಮೊದಲ ಮಂಗಳಮುಖಿ ಎನಿಸಿದ್ದ ಕೆನಡದ ಡೇನಿಯಲ್ ಮೆಕ್‌ಗಾಹೆ ಇನ್ನು ಮಹಿಳಾ ಕ್ರಿಕೆಟ್ನಲ್ಲಿ ಮುಂದುವರಿಯಲು ಅವಕಾಶವಿರುವುದಿಲ್ಲ. ಡೇನಿಯಲ್ ಮೆಕ್‌ಗಾಹೆ ಮಹಿಳಾ ಕ್ರಿಕೆಟ್ನಲ್ಲಿ ಇದುವರೆಗೆ 6 ಪಂದ್ಯ ಆಡಿದ್ದು, 118 ರನ್ ಬಾರಿಸಿದ್ದಾರೆ.