LATEST NEWS
ಕೋರ್ಟ್ ರಸ್ತೆಯಲ್ಲಿಲ್ಲ ಕಾನೂನಿಗೆ ಕಿಮ್ಮತ್ತು
ಕೋರ್ಟ್ ರಸ್ತೆಯಲ್ಲಿಲ್ಲ ಕಾನೂನಿಗೆ ಕಿಮ್ಮತ್ತು
ಮಂಗಳೂರು, ಫೆಬ್ರವರಿ 24: ರಸ್ತೆ ಅಗಲವಾದಂತೆ ವಾಹನ ಸಂಚಾರ ಸುಗಮವಾಗಿ ಸಾಗೋದು ಸಾಮಾನ್ಯ. ಆದರೆ ಮಂಗಳೂರಿನ ನ್ಯಾಯಾಲಯಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಮಾತ್ರ ಇದು ಕೊಂಚ ಡಿಫರೆಂಟ್. ಮಂಗಳೂರಿನ ನ್ಯಾಯಾಲಯಕ್ಕೆ ಹೊಸ ಕಟ್ಟಡ ನಿರ್ಮಾಣಗೊಂಡ ಬಳಿಕ ನ್ಯಾಯಾಲಯವನ್ನು ಸಂಪರ್ಕಿಸುವ ರಸ್ತೆಯನ್ನೂ ಅಭಿವೃದ್ಧಿಪಡಿಸಲಾಗಿದೆ.
ಸಂತ ಅಲೋಶಿಯಸ್ ಐಟಿಐ ಪಕ್ಕದಲ್ಲಿ ಹಾದುಹೋಗುವ ರಸ್ತೆಗೆ ಕಾಂಕ್ರೀಟು ಹಾಕಿ ನಾಲ್ಕು ವಾಹನಗಳು ಏಕಕಾಲಕ್ಕೆ ಹಾದು ಹೋಗಬಹುದಾದಂತ ರಸ್ತೆಯನ್ನು ನಿರ್ಮಿಸಲಾಗಿದೆ. ಆದರೆ ರಸ್ತೆ ನಿರ್ಮಾಣವಾದ ಬಳಿಕ ಈ ರಸ್ತೆಯಲ್ಲಿ ಕೆಲವು ಸಂದರ್ಭಗಳಲ್ಲಿ ಸೈಕಲ್ ಹೋಗಲೂ ದಾರಿ ಇಲ್ಲದಂತಹ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ.
ನ್ಯಾಯಾಲಯಕ್ಕೆ ಬರುವ ವಕೀಲರು, ಗ್ರಾಹಕರು ಈ ರಸ್ತೆಯಲ್ಲಿ ಸಿಕ್ಕ ಸಿಕ್ಕಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಹೋಗುತ್ತಿದ್ದು, ಈ ರಸ್ತೆಯ ಮೂಲಕ ಹಾದುಹೋಗುವ ಇತರ ವಾಹನ ಸವಾರರಿಗೆ ಭಾರೀ ತೊಂದರೆಯಾಗುತ್ತಿದೆ.
ಎಮರ್ಜೆನ್ಸಿಗೆಂದು ರಸ್ತೆಯ ಬದಿಯಲ್ಲಿ ಪಾರ್ಕ್ ಮಾಡಿದ ವಾಹನಗಳನ್ನು ಟೋಯ್ ವಾಹನದ ಮೂಲಕ ಸಾಗಿಸುವ ಸಂಚಾರಿ ಪೋಲೀಸರು ಮಾತ್ರ ಈ ರಸ್ತೆಯಲ್ಲಿ ರಸ್ತೆ ನಿಯಮಗಳನ್ನು ಗಾಳಿಗೆ ತೂರಾಡುತ್ತಿದ್ದರೂ, ಒಂದು ಬಾರಿಯೂ ಇತ್ತ ಬಂದು ರಸ್ತೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ವಾಹನಗಳ ವಿರುದ್ಧ ಕ್ರಮ ಜರುಗಿಸಿಲ್ಲ.
ಕಾನೂನನ್ನು ಅರಿದು ಕುಡಿದವರ ವಾಹನಗಳೇ ಇಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲುತ್ತಿದ್ದು, ತಮಗೆ ಯಾವುದೇ ಕಾನೂನು ಅನ್ವಯಿಸುವುದಿಲ್ಲ ಎನ್ನುವ ವಿಶ್ವಾಸವೂ ಇವರಲ್ಲಿದ್ದಂತೆ ಕಾಣುತ್ತಿದೆ. ಮಂಗಳೂರಿನ ನ್ಯಾಯಾಲಯಕ್ಕೆ ಘನಘೋರ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪಿಗಳು ಬರುತ್ತಿದ್ದು, ರಸ್ತೆಯಲ್ಲಾಗುತ್ತಿರುವ ಈ ರೀತಿ ಸಂಚಾರಿ ಒತ್ತಡದ ಪ್ರಯೋಜನ ಪಡೆದು ಈ ಕೈದಿಗಳು ಒಂದು ವೇಳೆ ಪೋಲೀಸ್ ವಾಹನದಿಂದ ಹಾರಿ ಪರಾರಿಯಾದರೆ ಮತ್ತೆ ಅವರನ್ನು ಹಿಡಿಯಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಯೂ ನಿರ್ಮಾಣವಾಗುತ್ತಿದೆ.
ಸಂಬಂಧಪಟ್ಟ ಸಂಚಾರಿ ಪೋಲೀಸರು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕಿದ್ದು, ರಸ್ತೆಯ ಒಂದು ಬದಿಯಲ್ಲಿ ಮಾತ್ರ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡುವ ಮೂಲಕ ಇತರ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎನ್ನುವ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.