ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತ ಪ್ರತಿನಿಧಿಸಲಿರುವ ಉಡುಪಿ ಸುಂದರಿ

ಮಂಗಳೂರು ಫೆಬ್ರವರಿ 24: ಕರಾವಳಿ ಬೆಡಗಿ ಅಡ್ಲೀನ್ ಕ್ಯಾಸ್ಟಲಿನೋ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತ ಪ್ರತಿನಿಧಿಸುವ ಅವಕಾಶ ಪಡೆದುಕೊಂಡಿದ್ದಾರೆ. ಕರಾವಳಿಯ ಬೆಡಗಿ ಮತ್ತೊಮ್ಮೆ ವಿಶ್ವಸುಂದರಿ ಕಿರೀಟ ಧರಿಸಲು ಸಜ್ಜಾಗಿದ್ದಾರೆ.

ಮುಂಬೈಯ ಯಶ್‌ರಾಜ್‌ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದಿನ ಆವೃತ್ತಿಯ ವಿಜೇತೆ ವರ್ತಿಕಾ ಸಿಂಗ್‌ ಅವರು ಅಡ್ಲಿನ್‌ ಅವರಿಗೆ ಕಿರೀಟ ತೊಡಿಸಿದರು. ಪುಣೆಯ ನೇಹಾ ಜೈಸ್ವಾಲ್‌ ಅವರು ಮಿಸ್‌ ದಿವಾ ರನ್ನರ್‌ ಅಪ್‌ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಅಡ್ಲೀನ್ ಪಡೆದುಕೊಂಡಿದ್ದಾರೆ.

ಬೆಂಗಳೂರು, ಮುಂಬೈ, ದೆಹಲಿ ಸೇರಿ ದೇಶದ ಪ್ರಮುಖ ಹತ್ತು ನಗರಗಳಲ್ಲಿ ನಡೆದ ಆಡಿಶನ್ ನಲ್ಲಿ ಆಯ್ಕೆಯಾಗಿ 2019ರ ಡಿಸೆಂಬರ್ ನಲ್ಲಿ ಮುಂಬೈನಲ್ಲಿ ಆಯ್ಕೆಯಾದ 20 ಫೈನಲಿಸ್ಟ್ ಗಳ ಪೈಕಿ ಕ್ಯಾಸ್ಟಲಿನೋ ಒಬ್ಬರಾಗಿದ್ದರು. ಈಗ 20 ಮಂದಿಯನ್ನು ಮಣಿಸಿದ್ದು, ವಿಶ್ವಸುಂದರಿ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮಾಜಿ ಮಿಸ್‌ ಯುನಿವರ್ಸ್‌ ಲಾರಾ ದತ್ತಾ, ಬಾಲಿವುಡ್‌ ನಟ ಅನಿಲ್‌ ಕಪೂರ್‌, ನಟಿ ಯಾಮಿ ಗೌತಮಿ ಮತ್ತಿತರರು ತೀರ್ಪುಗಾರರಾಗಿದ್ದರು.

ಅಡ್ಲೀನ್ ಕ್ಯಾಸ್ಟಲಿನೋ ತಂದೆತಾಯಿ ಮೂಲತಃ ಉಡುಪಿ ಜಿಲ್ಲೆಯ ಉದ್ಯಾವರದವರಾಗಿದ್ದು ಈಗ ಮುಂಬೈಯಲ್ಲಿ ನೆಲೆಸಿದ್ದಾರೆ.