BANTWAL
ಹೆಲ್ಮೆಟ್ ಹಾಕದಿದ್ದಕ್ಕೆ ಬೈಕ್ ಸವಾರನ ಕಾಲರ್ ಗೆ ಕೈ ಹಾಕಿದ ಟ್ರಾಫಿಕ್ ಪೊಲೀಸ್
ಹೆಲ್ಮೆಟ್ ಹಾಕದಿದ್ದಕ್ಕೆ ಬೈಕ್ ಸವಾರನ ಕಾಲರ್ ಗೆ ಕೈ ಹಾಕಿದ ಟ್ರಾಫಿಕ್ ಪೊಲೀಸ್
ಬಂಟ್ವಾಳ ಅಕ್ಟೋಬರ್ 31: ಬುದ್ದಿವಂತರ ಜಿಲ್ಲೆಗಳೆಂದು ಕರೆದುಕೊಳ್ಳುವ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಪೊಲೀಸ್ ರು ಸಂಚಾರಿ ನಿಯಮ ಪಾಲನೆ ವಿಚಾರದಲ್ಲಿ ಸಾರ್ವಜನಿಕರೊಂದಿಗೆ ದುರ್ವರ್ತನೆ ತೋರುತ್ತಿರುವ ಘಟನೆಗಳು ದಿನಂಪ್ರತಿ ನಡೆಯುತ್ತಿದೆ.
ಕಳೆದ ವಾರದ ಉಡುಪಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸವಾರನ ಜೀವಕ್ಕೆ ಸಂಚಕಾರ ತಂದಿದ್ದ ಪೊಲೀಸರು ಮತ್ತೆ ಬಂಟ್ವಾಳದಲ್ಲಿ ಹೆಲ್ಮೆಟ್ ಹಾಕದೆ ಪ್ರಯಾಣಿಸುತ್ತಿದ್ದ ಬೈಕ್ ಸವಾರರ ಶರ್ಟ್ ಕಾಲರ್ ಗೆ ಕೈ ಹಾಕಿದ ಘಟನೆ ನಡೆದಿದೆ.
ಈ ಘಟನೆ ಬಂಟ್ವಾಳ ತಾಲೂಕಿನ ಮೆಲ್ಕಾರ್ ಪೇಟೆಯಲ್ಲಿ ನಡೆದಿದ್ದು, ಬೈಕಿನಲ್ಲಿ ಹಿಂಬದಿ ಸವಾರರೊಬ್ಬರು ಹೆಲ್ಮೆಟ್ ಹಾಕದೆ ಪ್ರಯಾಣಿಸುತ್ತಿದ್ದರು. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸ್ ಎಎಸ್‍ಐ ಬಾಲಕೃಷ್ಣ ಬೈಕ್ ಸವಾರರನ್ನು ನಿಲ್ಲಿಸಿದ್ದಾರೆ. ಬಳಿಕ ಯುವಕನ ಶರ್ಟ್ ಕಾಲರ್ ಹಿಡಿದು ತಳ್ಳುತ್ತಾ ಎಳೆದಾಡಿದ್ದಾರೆ.
ಈ ದೃಶ್ಯವನ್ನು ಮತ್ತೊಬ್ಬ ಬೈಕ್ ಸವಾರ ತಮ್ಮ ಮೊಬೈಲಿನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಸವಾರ ತನ್ನ ಮೇಲೆ ಕೇಸು ದಾಖಲಿಸಿ ಎಂದು ಗೋಗರೆಯುತ್ತಿದ್ದರೂ, ಟ್ರಾಫಿಕ್ ಪೊಲೀಸ್ ಕಾಲರ್ ಹಿಡಿದು ತಳ್ಳಾಡಿದ್ದಾರೆ. ರೆಕಾರ್ಡ್ ತೋರಿಸುವಂತೆ ದರ್ಪ ತೋರಿದ್ದಾರೆ. ಟ್ರಾಫಿಕ್ ಪೊಲೀಸರ ದುರ್ವರ್ತನೆ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.