LATEST NEWS
ಕೊಳಕ್ಕೆ ಬಿದ್ದ ಗಂಗಾಸ್ನಾನಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ – 8 ಮಕ್ಕಳು ಸೇರಿದಂತೆ 15 ಮಂದಿ ಸಾವು
ಉತ್ತರಪ್ರದೇಶ ಫೆಬ್ರವರಿ 24: ಮಾಘ ಮಾಸದ ಹುಣ್ಣಿಮೆಯ ಪ್ರಯುಕ್ತ ಗಂಗಾಸ್ನಾನಕ್ಕೆ ತೆರಳುತ್ತಿದ್ದ ಭಕ್ತರ ಟ್ರ್ಯಾಕ್ಟರ್ ಟ್ರಾಲಿಯೊಂದು ರಸ್ತೆ ಬದಿ ಇದ್ದ ಕೊಳಕ್ಕೆ ಬಿದ್ದ ಪರಿಣಾಮ 8 ಮಕ್ಕಳು ಸೇರಿದಂತೆ 15 ಮಂದಿ ಸಾವನಪ್ಪಿದ ಘಟನೆ ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ನಡೆದಿದೆ.
ಪಟಿಯಾಲಿ ಕೊಟ್ವಾಲಿ ಪ್ರದೇಶದ ದರಿಯಾವ್ಗಂಜ್ ನಿಲ್ದಾಣದ ಬಳಿ ಸಂಭವಿಸಿದ ಅಪಘಾತದಲ್ಲಿ ಎಂಟು ಮಕ್ಕಳು ಮತ್ತು ಏಳು ಮಹಿಳೆಯರು ಸೇರಿದಂತೆ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಲಿಗಢ ವಲಯದ ಐಜಿ ಶಲಭ್ ಮಾಥುರ್ ಮಾಹಿತಿ ನೀಡಿದ್ದಾರೆ. ರಸ್ತೆಯಲ್ಲಿ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದಾಗ ಟ್ರ್ಯಾಕ್ಟರ್ ಚಾಲಕ ನಿಯಂತ್ರಣ ಕಳೆದುಕೊಂಡಿದ್ದ ಎಂದು ಅವರು ತಿಳಿಸಿದ್ದಾರೆ.
ಗ್ರಾಮಸ್ಥರನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ಕೆಸರು ತುಂಬಿದ ಕೊಳಕ್ಕೆ ಪಲ್ಟಿಯಾಗಿದ್ದರಿಂದ ಹೆಚ್ಚಿನ ಸಾವು ನೋವು ಸಂಭವಿಸಿದೆ. ಗಾಯಗೊಂಡವರನ್ನು ಕಾಸ್ಗಂಜ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಘಾತದ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಘಾತ ವ್ಯಕ್ತಪಡಿಸಿದ್ದಾರೆ. ತೀವ್ರ ದುಃಖ ವ್ಯಕ್ತಪಡಿಸಿದ ಅವರು, ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.