LATEST NEWS
ತನ್ನದೇ ಟ್ರ್ಯಾಕ್ಟರ್ ನಡಿಗೆ ಸಿಲುಕಿ ಬೈಕ್ ಸವಾರ ಧಾರುಣ ಸಾವು

ಮಂಗಳೂರು ಜೂನ್ 22: ಟ್ರ್ಯಾಕ್ಟರ್ ನಡಿಗೆ ಸಿಲುಕಿ ಬೈಕ್ ಸವಾರ ದಾರುಣ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪುಣ್ಯಕೋಟಿ ನಗರದ ಬಳಿ ನಡೆದಿದೆ.
ದುರಂತವೆಂದರೆ ಮೃತ ಬೈಕ್ ಸವಾರ ಅದೇ ಟ್ರ್ಯಾಕ್ಟರ್ ಚಾಲಕನಾಗಿದ್ದು ಸೋಮವಾರ ರಜೆ ತೆಗೆದುಕೊಂಡಿದ್ದು ಬದಲಿ ಚಾಲಕನನ್ನು ಕರೆಸಿಕೊಂಡಿದ್ದರು. ಪುಣ್ಯಕೋಟಿ ನಗರದ ಬಳಿಯ ಮನೆಯೊಂದರ ರಸ್ತೆ ಅಗೆಯುವ ಕೆಲಸ ನಿರ್ವಹಿಸಿದ ಬದಲಿ ಚಾಲಕ ಒಳರಸ್ತೆಯಿಂದ ಮುಡಿಪು ಮಂಜನಾಡಿ ಸಂಪರ್ಕ ರಸ್ತೆಗೆ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದಂತೆಯೇ ಅದೇ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಗೆ ತಾಗಿದ್ದು ಅಪಘಾತದ ರಭಸಕ್ಕೆ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ.

ನಿಯಂತ್ರಣಕ್ಕೆ ಬಾರದ ಟ್ರ್ಯಾಕ್ಟರ್ ಬೈಕ್ ಸವಾರನ ತಲೆಯ ಮೇಲೆ ಚಲಿಸಿದ್ದು ಬೈಕ್ ಸವಾರ ದಾರುಣ ಸಾವನ್ನಪ್ಪಿದ್ದಾರೆ. ಕೊಣಾಜೆ ಹಾಗೂ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.