Connect with us

LATEST NEWS

ಜನಾರ್ದನ ಪೂಜಾರಿ ಸ್ಥಾನ ತುಂಬಲಿದ್ದಾರೆಯೇ ಹರಿಪ್ರಸಾದ್ ?

ಸಿದ್ದು ವಿರುದ್ಧ ಮುನ್ನೆಲೆಗೆ ತರಲು ಮೂಲ ಕಾಂಗ್ರೆಸಿಗರ ಪ್ಲಾನ್

ಬೆಂಗಳೂರು, ಜೂನ್ 21, ರಾಜ್ಯ ಕಾಂಗ್ರೆಸಿನಲ್ಲಿ ಬಹುಕಾಲದ ಬಳಿಕ ಜಾತಿ ಧ್ರುವೀಕರಣದ ಪರ್ವ ಆರಂಭಗೊಂಡಿದೆ. ಜನತಾ  ಪರಿವಾರ ಮೂಲದ ಸಿದ್ದರಾಮಯ್ಯ ಹಿಡಿತದಲ್ಲಿರುವ ಕಾಂಗ್ರೆಸನ್ನು ಸಂಪೂರ್ಣವಾಗಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಮೂಲ ಕಾಂಗ್ರೆಸಿಗರು ಒಂದಾಗಿದ್ದಾರೆ.

ಮೂಲ ಕಾಂಗ್ರೆಸಿಗರಲ್ಲಿ ಹಿರಿತಲೆಗಳ ಪೈಕಿ ಪಕ್ಷದಲ್ಲಿ ಪ್ರಬಲರಾಗಿದ್ದವರು ಆಸ್ಕರ್ ಫೆರ್ನಾಂಡಿಸ್, ಜನಾರ್ದನ ಪೂಜಾರಿ ಮತ್ತು ಎಸ್ಸೆಂ ಕೃಷ್ಣ. ಆದರೆ ಈ ಮೂವರೂ ಈಗ ಸಕ್ರಿಯ ರಾಜಕಾರಣದಲ್ಲಿ ಇಲ್ಲ. ಎಸ್ಸೆಂ ಕೃಷ್ಣ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲದಿದ್ದರೂ, ಪಕ್ಷದಲ್ಲಿ ತನ್ನದೇ ಆದ ಪ್ರಭಾ ವಲಯವನ್ನು ಹೊಂದಿದ್ದಾರೆ. ವಿಶೇಷ ಅಂದರೆ, ಈ ಮೂವರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತರು. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಹೊಂದಿರುವ ಸಿದ್ದರಾಮಯ್ಯ ಬಣದ ವಿರುದ್ಧ ಮುನಿಸಿಕೊಂಡಿರುವ ಬಹಳಷ್ಟು ಹಿರಿತಲೆಗಳು ಈಗ ಒಂದಾಗಿದ್ದು ಪಕ್ಷದಲ್ಲಿ ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗಿದೆ. ಇದರ ಲಾಭವನ್ನು ಎತ್ತಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂದಾಗಿದ್ದರಲ್ಲಿ ವಿಶೇಷ ಏನಿಲ್ಲ.

ಇದೇ ಕಾರಣಕ್ಕೆ, ಕರಾವಳಿಯಲ್ಲಿ ರಾಜಕೀಯದಿಂದ ನೇಪಥ್ಯಕ್ಕೆ ಸರಿದಿರುವ ಜನಾರ್ದನ ಪೂಜಾರಿ ಸ್ಥಾನ ತುಂಬಲು ಈಗ ಬಿ.ಕೆ.ಹರಿಪ್ರಸಾದ್ ಅವರನ್ನು ಮುನ್ನೆಲೆಗೆ ತರಲಾಗಿದೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ಹರಿಪ್ರಸಾದ್ ಹಿಂದುಳಿದ ಬಿಲ್ಲವ ಸಮುದಾಯಕ್ಕೆ ಸೇರಿರುವುದು ಮತ್ತು ಹೈಕಮಾಂಡ್ ಮಟ್ಟದಲ್ಲಿ ಛಾಪು ಹೊಂದಿದ್ದಾರೆ ಎನ್ನುವುದು ಪ್ಲಸ್ ಪಾಯಿಂಟ್. ಮೂರು ಅವಧಿಗೆ ರಾಜ್ಯಸಭಾ ಸದಸ್ಯರಾಗಿ ರಾಷ್ಟ್ರೀಯ ರಾಜಕಾರಣದಲ್ಲಿಯೇ ಇದ್ದ ಹರಿಪ್ರಸಾದ್ ಅವರನ್ನು ರಾಜ್ಯ ರಾಜಕಾರಣಕ್ಕೆ ತಂದಿದ್ದಲ್ಲದೆ, ಸಿದ್ದರಾಮಯ್ಯ ಎದುರಲ್ಲಿ ಮತ್ತೊಬ್ಬ ಹಿಂದುಳಿದ ನಾಯಕನಾಗಿ ಬಿಂಬಿಸಲು ಪ್ಲಾನ್ ಎನ್ನುವ ಮಾತು ಕೇಳಿಬರುತ್ತಿದೆ. ಈ ಹಿಂದೆ ಜನಾರ್ದನ ಪೂಜಾರಿ ಕೂಡ ಕೆಪಿಸಿಸಿ ಅಧ್ಯಕ್ಷರಾಗಿ ಈಡಿಗ – ಬಿಲ್ಲವ ಮುಖಂಡರಾಗಿ ರಾಜ್ಯದಲ್ಲಿ ಛಾಪು ಮೂಡಿಸಿದ್ದ ವ್ಯಕ್ತಿ. ಸಿದ್ದರಾಮಯ್ಯ ಗುಂಪು ಪಕ್ಷದಲ್ಲಿ ಸಕ್ರಿಯವಾದ ಬಳಿಕ ಪ್ರಬಲ ಸಿದ್ದು ವಿರೋಧಿಯಾಗಿ ನಿಂತ ಪೂಜಾರಿ, ಆ ಬಳಿಕ ಪಕ್ಷದಲ್ಲಿ ಮೂಲೆಗುಂಪಾಗಿದ್ದರು.

ದಕ್ಷಿಣ ಕರ್ನಾಟಕದ 35 ವಿಧಾನಸಭಾ ಕ್ಷೇತ್ರಗಳಲ್ಲಿ ಈಡಿಗ ಅಥವಾ ಬಿಲ್ಲವ ಸಮುದಾಯದ ಮತಗಳು ನಿರ್ಣಾಯಕ. ಬಿಲ್ಲವ ಬಿಟ್ಟರೆ ದಕ್ಷಿಣ ಕರ್ನಾಟಕದಲ್ಲಿ ಕುರುಬ ಸಮುದಾಯದ ಮತಗಳು ಅತ್ಯಧಿಕ. ಸದ್ಯಕ್ಕೆ ಕುರುಬ ಸಮುದಾಯದ ನಾಯಕರಾಗಿ ಗುರುತಿಸಲ್ಪಟ್ಟಿರುವ ಸಿದ್ದರಾಮಯ್ಯ ವಿರುದ್ಧ ಹರಿಪ್ರಸಾದ್ ಅವರನ್ನು ಮುನ್ನೆಲೆಗೆ ತಂದರೆ ಪಕ್ಷದಲ್ಲಿ ಜಾತಿ ಸಮೀಕರಣಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಉಪಾಯವೂ ನಡೆದಿದೆ. ಇದಕ್ಕಾಗಿ ಸದ್ದಿಲ್ಲದೆ ಹರಿಪ್ರಸಾದ್ ಅವರನ್ನು ಪರಿಷತ್ತಿಗೆ ತಂದು ಪಕ್ಷವನ್ನು ಪುನರ್ ಸಂಘಟಿಸಲು ಡಿಕೆಶಿ ಪ್ಲಾನ್ ರೂಪಿಸಿದ್ದಾರೆ ಎಂಬ ರಾಜಧಾನಿಯಲ್ಲಿ ಕೇಳಿಬರುತ್ತಿದೆ.

ಸಿದ್ದುಗೆ ಮುಳುವಾದ ಸರಕಾರ ಪತನ !

ಕಳೆದ ಬಾರಿ ರಾಜ್ಯ ಸರಕಾರ ಪತನದ ಸಂದರ್ಭದಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದವರಲ್ಲಿ ಹೆಚ್ಚಿನ ಮಂದಿ ಸಿದ್ದರಾಮಯ್ಯ ಆಪ್ತರೇ ಆಗಿದ್ದವರು. ಮೇಲಾಗಿ ಕುರುಬ ಸಮುದಾಯಕ್ಕೇ ಸೇರಿದವರು. ಎಂಟಿಬಿ ನಾಗರಾಜ್, ಬೈರತಿ ಸೋಮಶೇಖರ್, ಆರ್.ಶಂಕರ್, ಕಾಂಗ್ರೆಸ್ ಬಿಟ್ಟು ಜೆಡಿಎಸ್ಸಿನಲ್ಲಿದ್ದ ಎಚ್.ವಿಶ್ವನಾಥ್ ಕುರುಬ ಸಮುದಾಯದ ಪ್ರತಿನಿಧಿಗಳಾಗಿಯೇ ರಾಜಕೀಯದಲ್ಲಿ ಮುನ್ನೆಲೆಗೆ ಬಂದವರು. ಹೀಗೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರ ಕೆಡವಲು ಸಿದ್ದರಾಮಯ್ಯ ಆಪ್ತರೇ ಕಾರಣರಾಗಿದ್ದರು ಅನ್ನುವ ಅಂಶ ಈಗ ಸಿದ್ದರಾಮಯ್ಯರಿಗೆ ಮುಳುವಾಗಿದೆ. ಇದೇ ವಿಚಾರವನ್ನು ಸಿದ್ದರಾಮಯ್ಯ ವಿರೋಧಿಗಳು ಹೈಕಮಾಂಡ್ ಮಟ್ಟದಲ್ಲಿ ಛೂಬಿಟ್ಟಿದ್ದು, ಸಿದ್ದು ಬದಲಿಗೆ ಇನ್ನೊಬ್ಬ ಹಿಂದುಳಿದ ನಾಯಕನಿಗೆ ಮಣೆ ಹಾಕಲು ಕಾರಣ ಎನ್ನಲಾಗ್ತಿದೆ.

Facebook Comments

comments