Connect with us

    LATEST NEWS

    ಕರಾವಳಿಯಲ್ಲಿ ಕೋಮು ಸೌಹಾರ್ದ ಕಾಪಾಡಲು ಡಾ. ವಿರೇಂದ್ರ ಹೆಗ್ಗಡೆ ಮನವಿ

    ಕರಾವಳಿಯಲ್ಲಿ ಕೋಮು ಸೌಹಾರ್ದ ಕಾಪಾಡಲು ಡಾ. ವಿರೇಂದ್ರ ಹೆಗ್ಗಡೆ ಮನವಿ

    ಪುತ್ತೂರು, ಜನವರಿ 09 : ಕರಾವಳಿಯಲ್ಲಿ ಕೋಮುಸೌಹಾರ್ದ, ಶಾಂತಿ ಕಾಪಾಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಜನತೆಯಲ್ಲಿ ಮನವಿ ಮಾಡಿದ್ದಾರೆ.

    ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಕರಾವಳಿಯಲ್ಲಿ ಕಳೆದ ಸ್ವಲ್ಪ ಸಮಯದಿಂದ ಅವಿರತವಾಗಿ ಅಶಾಂತಿಯ ವಾತಾವರಣ ಕಂಡುಬರುತ್ತಿದೆ. ಅನೇಕ ಸಾವು-ನೋವುಗಳು ಸಂಭವಿಸಿವೆ. ಎರಡೂ ಧರ್ಮಗಳ ವ್ಯಕ್ತಿಗಳು ಬಲಿಯಾಗುತ್ತಿದ್ದಾರೆ. ಘಟನಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಒಂದು ಧರ್ಮದ ವ್ಯಕ್ತಿಯ ಕೊಲೆಯಾದ ಬಳಿಕ ಪ್ರತೀಕಾರವೆಂಬಂತೆ ಇನ್ನೊಂದು ಧರ್ಮದ ವ್ಯಕ್ತಿಯ ಹತ್ಯೆ ನಡೆಯುವುದು ಕಂಡುಬರುತ್ತದೆ.

    ಕರಾವಳಿ ಭಾಗದ ಜನರು ಶಾಂತಿಪ್ರಿಯರು. ಪರಸ್ಪರ ನಂಬಿಕೆ, ಪ್ರೀತಿ-ವಿಶ್ವಾಸ ಮತ್ತು ಸ್ನೇಹದಿಂದ ಸಹಜ ಜೀವನ ನಡೆಸುತ್ತಿದ್ದ ಜನರಲ್ಲಿ ಸಂಶಯ, ಅಪನಂಬಿಕೆ ಮತ್ತು ಸೇಡಿನ ಭಾವನೆಗಳು ಕಾಣುತ್ತಿವೆ. ಈ ಸಾವು-ನೋವಿನ ಸಂದರ್ಭಗಳಲ್ಲಿ ನಿರ್ದಿಷ್ಟವಾದ ಉದ್ದೇಶಗಳು ತಿಳಿಯುತ್ತಿಲ್ಲವಾದರೂ ಅವು ಪರಸ್ಪರ ಅಪನಂಬಿಕೆ ಮತ್ತು ಅಶಾಂತಿಗೆ ಕಾರಣವಾಗುತ್ತಿವೆ.

    ವಿಚಾರ ಭೇದಗಳಿದ್ದಲ್ಲಿ ಪರಸ್ಪರ ಮಾತುಕತೆ ಹಾಗೂ ವಿಚಾರ ವಿನಿಮಯದಿಂದ ಪರಿಹಾರ ಕಂಡುಕೊಳ್ಳಬೇಕೇ ಹೊರತು ಹಿಂಸೆಯ ಮಟ್ಟಕ್ಕೆ ಕೊಂಡೊಯ್ಯುವುದು ಯಾವ ಧರ್ಮಕ್ಕೂ ಶ್ರೇಯಸ್ಕರವಲ್ಲ.

    ಅವಸರದ ಮತ್ತು ಉದ್ವೇಗದ ತೀರ್ಮಾನಗಳು ಹಾಗೂ ಘಟನೆಗಳಿಂದ ನಿರ್ದಿಷ್ಟ ಗುರಿ ಮತ್ತು ಪರಿಹಾರವಿಲ್ಲದೆ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ದಯವಿಟ್ಟು ಎಲ್ಲರೂ ಶಾಂತಿ ಮತ್ತು ಸಾಮರಸ್ಯವನ್ನು ಬಯಸಿ ಜನಜೀವನದಲ್ಲಿ ಸಹಜತೆ ಹಾಗೂ ಸೌಹಾರ್ದ ನೆಲೆಗೊಳ್ಳುವಂತೆ ನಡೆದುಕೊಳ್ಳಬೇಕಾಗಿದೆ.

    ಪ್ರತೀಕಾರದ ಮನೋಧರ್ಮವನ್ನು ತೊರೆದು ವಿಶ್ವಾಸ ಮತ್ತು ಸ್ನೇಹದ ವಾತಾವರಣವನ್ನು ಉಂಟು ಮಾಡೋಣ ಎಂದು ಡಾ| ಹೆಗ್ಗಡೆ ಕರೆ ನೀಡಿದ್ದಾರೆ. ಇತ್ತೀಚೆಗೆ ನಡೆದ ಹಲ್ಲೆಯ ಸಂದರ್ಭದಲ್ಲಿ ಗಾಯಗೊಂಡವರನ್ನು ತತ್‌ಕ್ಷಣ ಆಸ್ಪತ್ರೆಗೆ ಕೊಂಡೊಯ್ದವರು ಯಾರು ಎಂಬುದನ್ನು ತಿಳಿದರೆ ಅವರು ಧರ್ಮವನ್ನು ಗಮನಿಸದೆ ಸ್ಪಂದಿಸಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.ಇಂತಹ ಸಂದರ್ಭಗಳಲ್ಲಿ ಮಾನವೀಯತೆ ಮೆರೆಯುತ್ತದೆಯೇ ಹೊರತು ಜಾತಿ, ಮತ, ಧರ್ಮವಲ್ಲ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕಾಗಿದೆ.

    ಈ ಸಂದರ್ಭದಲ್ಲಿ ವಿಶೇಷವಾಗಿ ಯುವ ಜನತೆ ಸಂಯಮ ಮತ್ತು ತಾಳ್ಮೆಯಿಂದ ವರ್ತಿಸಬೇಕಾದ ಅಗತ್ಯ ಇದೆ. ಎಲ್ಲರೂ; ವಿಶೇಷವಾಗಿ ತಂದೆ- ತಾಯಿ, ಸಹೋದರ-ಸಹೋದರಿಯರು ತಮ್ಮ ತಮ್ಮ ಮನೆಗಳಲ್ಲಿ ತಾಳ್ಮೆ ಮತ್ತು ಶಾಂತಿಯನ್ನು ಕಾಪಾಡುವ ಬಗ್ಗೆ ಮಾತುಕತೆ ನಡೆಸಿ. ಸಹನೆ, ಸೌಹಾರ್ದ ಮತ್ತು ಸಂಯಮವನ್ನು ಬೆಳೆಸಿಕೊಂಡು ಎಲ್ಲರೂ ಶಾಂತಿ – ಸಾಮರಸ್ಯದಿಂದ ಬಾಳ್ಳೋಣ ಎಂದು ಅವರು ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply