KARNATAKA
Karkala Gang Rape : ಡ್ರಗ್ಸ್ ಕುರಿತ ರಕ್ತ ಪರೀಕ್ಷೆಯಲ್ಲಿ ಯುವತಿಯ ವರದಿ ಪಾಸಿಟಿವ್,ಉಡುಪಿ ಎಸ್‌ಪಿ ಡಾ.ಕೆ.ಅರುಣ್
ಉಡುಪಿ: ಕಾರ್ಕಳ ಯುವತಿಯ ಗ್ಯಾಂಗ್ ರೇಪ್ (Karkala Gang Rape) ಪ್ರಕರಣಕ್ಕೆ ಸಂಬಂಧಿಸಿ ಮಾದಕ ದ್ರವ್ಯ ಸೇವನೆ ಕುರಿತು ಸಂತ್ರಸ್ತೆ ಹಾಗೂ ಆರೋಪಿಗಳ ರಕ್ತದ ಮಾದರಿಯ ಪರೀಕ್ಷೆ ನಡೆಸಲಾಗಿದ್ದು, ಸಂತ್ರಸ್ತೆಯ ವರದಿಯಲ್ಲಿ ಪಾಸಿಟಿವ್ ಮತ್ತು ಆರೋಪಿಗಳಾದ ಅಲ್ತಾಫ್ ಹಾಗೂ ಸವೇರಾ ರಿಚರ್ಡ್ ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.
ಯುವತಿಯ ರಕ್ತದ ಮಾದರಿಯಲ್ಲಿ ಮಾದಕ ದ್ರವ್ಯ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಆರೋಪಿ ಅಲ್ತಾಫ್‌ನನ್ನು ಕಷ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದ್ದು, ಈ ವೇಳೆ ಆತ ತನ್ನ ಕಾರಿನಲ್ಲಿದ್ದ ಒಂದು ಪುಡಿಯನ್ನು ತೋರಿಸಿ, ಇದನ್ನೇ ಆ ಹುಡುಗಿ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾನೆ. ಈ ಪುಡಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅದು ಯಾವ ಮಾದರಿಯ ಮಾದಕ ದ್ರವ್ಯ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತದೆ ಎಂದರು.
ಯುವತಿಯ ರಕ್ತದಲ್ಲಿ ಕಂಡು ಬಂದಿರುವ ಮಾದಕ ದ್ರವ್ಯ ಹಾಗೂ ಆರೋಪಿ ತೋರಿಸಿರುವ ಮಾದಕ ದ್ರವ್ಯ ಒಂದೇ ಆಗಿದೆಯೇ ಎಂಬುದನ್ನು ತುಲನೆ ಮಾಡಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮಾದಕ ದ್ರವ್ಯಕ್ಕೆ ಸಂಬಂಧಿಸಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಈ ಮಾದಕ ದ್ರವ್ಯವನ್ನು ಎಲ್ಲಿಂದ ತರಲಾಗಿದೆ ಮತ್ತು ಎಲ್ಲಿಂದ ಬಂದಿದೆ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ. ಆದಷ್ಟು ಬೇಗ ಅದನ್ನು ಪತ್ತೆ ಹಚ್ಚಲಾಗು ವುದು. ನೊಂದ ಯುವತಿಯು ನ್ಯಾಯಾಧೀಶರ ಮುಂದೆ ಹೇಳಿಕೆ ಕೊಡಲು ಬಾಕಿ ಇದ್ದು, ಆಕೆ ಚೇತರಿಕೆಯಾದ ಬಳಿಕ ನ್ಯಾಯಾಂಗದ ಮುಂದೆ ಹಾಜರುಪಡಿಸಲಾಗುವುದು. ಆ ಮೂಲಕ ಆದಷ್ಟು ಬೇಗ ಈ ಅತ್ಯಾಚಾರ ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಲಾಗುವುದು ಎಂದು ಎಸ್ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ.