LATEST NEWS
ತಿತ್ಲಿ ಚಂಡಮಾರುತದ ಎಫೆಕ್ಟ್ ರೌದ್ರಾವತಾರ ತಾಳಿದ ಕರಾವಳಿ ಕಡಲು

ತಿತ್ಲಿ ಚಂಡಮಾರುತದ ಎಫೆಕ್ಟ್ ರೌದ್ರಾವತಾರ ತಾಳಿದ ಕರಾವಳಿ ಕಡಲು
ಮಂಗಳೂರು ಅಕ್ಟೋಬರ್ 10: ಓಡಿಶಾ ಮತ್ತು ಆಂಧ್ರದ ಕರಾವಳಿಯಲ್ಲಿ ಕಾಣಿಸಿಕೊಂಡಿರುವ ತಿತ್ಲಿ ಚಂಡಮಾರುತದ ಪ್ರಭಾವ ಕರಾವಳಿಯ ಕಡಲ ತೀರದ ಮೇಲೂ ಉಂಟಾಗಿದ್ದು, ಕಡಲಿನಲ್ಲಿ ಅಲೆಗಳ ಅಬ್ಬರ ಮೀತಿ ಮಿರಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಉಂಟಾಗಿರುವ ತಿತ್ಲಿ ಚಂಡಮಾರುತ ಆಂಧ್ರ ಮತ್ತು ಒಡಿಶಾ ಕರಾವಳಿ ತೀರದತ್ತ ಧಾವಿಸುತ್ತಿದೆ. ಈ ನಡುವೆ ತಿತ್ಲಿ ಚಂಡಮಾರುತದ ಪ್ರಭಾವ ಕರ್ನಾಟಕ ಕರಾವಳಿಯ ಮೇಲೂ ಆಗಿದೆ.

ಬೆಳಗ್ಗಿನಿಂದಲೇ ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರು, ಉಳ್ಳಾಲ, ಸೋಮೇಶ್ವರ-ಉಚ್ಚಿಲದ ಹಲವು ಕಡೆ ಕಡಲಿನ ಅಬ್ಬರ ಮಿತಿ ಮೀರಿದೆ.
ಸೋಮೇಶ್ವರ ಉಚ್ಚಿಲ ಸಮೀಪದ ಪೆರಿಬೈಲ್‌ನಲ್ಲಿ ಕಡಲಿನ ಅಲೆಗಳು ಸಮುದ್ರ ಪಕ್ಕದ ರಸ್ತೆಯನ್ನೂ ದಾಟಿ ಮುನ್ನುಗ್ಗಿವೆ. ಅಲ್ಲದೆ ನಾಲ್ಕೈದು ಮನೆಯೊಳಗೆ ನೀರು ನುಗ್ಗಿವೆ. ಸಮುದ್ರದ ಅಲೆಗಳು ಭಾರಿ ಎತ್ತರಕ್ಕೆ ಅಪ್ಪಳಿಸುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಕಡಲ ಅಬ್ಬರಕ್ಕೆ ಹೆದರಿದ ಮೀನುಗಾರರು ಭಯಭೀತಗೊಂಡು ಸಮುದ್ರಕ್ಕಿಳಿಯಲಿಲ್ಲ ಎಂದು ತಿಳಿದು ಬಂದಿದೆ.
ಆ ಹಿನ್ನಲೆಯಲ್ಲಿ ಪಣಂಬೂರು ಬೀಚ್‌ನಲ್ಲಿ ಮುಂಜಾಗ್ರತಾ ಕ್ರಮ ವಹಿಸಲು ಹವಾಮಾನ ಇಲಾಖೆ ಸೂಚಿಸಿದೆ. ಈ ನಡುವೆ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಂಭವವೂ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ ಅಕ್ಟೋಬರ್ 13ರವರೆಗೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.