KARNATAKA
ಪುಟ್ಟ ಮಗುವನ್ನು ಶೌಚಾಲಯದಲ್ಲಿ ಬಿಟ್ಟು ಅಂಗನವಾಡಿಗೆ ಬೀಗ ಹಾಕಿದ ಸಿಬ್ಬಂದಿ!
ಕೋಲಾರ, ಸೆಪ್ಟೆಂಬರ್ 16: ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿಯ ನಿರ್ಲಕ್ಷ್ಯದಿಂದಾಗಿ ಮಗುವೊಂದು 2 ಗಂಟೆಗಳ ಕಾಲ ಶೌಚಾಲಯದಲ್ಲಿಯೇ ಕಾಲಕಳೆದಿರುವ ಘಟನೆ ಕೋಲಾರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಹಾರೋಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಗನವಾಡಿ ಶಿಕ್ಷಕಿ ಸುಧಾ ಹಾಗೂ ಸಹಾಯಕಿ ಶಾರದ ಎಂಬುವರ ಎಡವಟ್ಟಿನಿಂದಾಗಿ, ಗಜೇಂದ್ರ ಎಂಬ ಮಗು ಕೆಲಕಾಲ ಶೌಚಾಲಯದಲ್ಲಿಯೇ ಬಂಧಿಯಾಗಿದ್ದಾನೆ. ಎಂದಿನಂತೆ ಅಂಗನವಾಡಿಗೆ ಹೋಗಿದ್ದ ಮಗು ಮನೆಗೆ ಬರುವ ವೇಳೆ ಶೌಚಾಲಯಕ್ಕೆ ಹೋಗಿದ್ದು, ಅದನ್ನು ನೋಡದೆ ಶಿಕ್ಷಕಿ ಹಾಗೂ ಸಹಾಯಕಿ ಅಂಗನವಾಡಿ ಶೌಚಾಲಯಕ್ಕೆ ಬೀಗ ಹಾಕಿಕೊಂಡು ಬಂದಿದ್ದಾರೆ.
ನಂತರ ಊರಲ್ಲೆಲ್ಲಾ ಮಗನಿಗಾಗಿ ಹುಡುಕಾಡಿದ ಪೋಷಕರು, ಕೊನೆಗೆ ಅಂಗನವಾಡಿ ಬಳಿ ಬಂದಾಗ ಶೌಚಾಲಯದಲ್ಲಿ ಮಗು ಅಳುತ್ತಿರುವುದು ಕಂಡು ಬಂದಿದ್ದು, ಶೌಚಾಲಯದಲ್ಲಿ ಮಗು ಪತ್ತೆಯಾಗಿದ್ದಾನೆ. ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿ ಬೇಜವಾಬ್ದಾರಿಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಮಗುವನ್ನು ಶೌಚಾಲಯದಿಂದ ಹೊರಗೆ ಕರೆತಂದ ವೀಡಿಯೋ ವೈರಲ್ ಆಗಿದೆ.
ಇನ್ನೂ ಸ್ಥಳಕ್ಕೆ ಅಂಗನವಾಡಿ ಇಲಾಖೆ ಅಧಿಕಾರಿಗಳು ಸೇರಿದಂತೆ ಬಂಗಾರಪೇಟೆ ಸಿಡಿಪಿಓ ಭೇಟಿ ನೀಡಿ ಶಿಕ್ಷಕಿ ಹಾಗೂ ಸಹಾಯಕಿಯ ಅಮಾನತಿಗೆ ಶಿಫಾರಸ್ಸು ಮಾಡಿದ್ದಾರೆ. ಖುದ್ದು ಗ್ರಾಮಕ್ಕೆ ಭೇಟಿ ನೀಡಿ ತಾಯಿ ಹಾಗೂ ಮಗುವಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.