Connect with us

    LATEST NEWS

    ರಾಜ್ಯ ಸರಕಾರದ ದೇವಸ್ಥಾನಗಳ ಆನ್ ಲೈನ್ ಸೇವೆ ವಿವಾದ, ಕುಕ್ಕೆ ಸುಬ್ರಹ್ಮಣ್ಯದ ನಕಲಿ ವೆಬ್ ಸೈಟ್ ಮೂಲಕ ಅಕ್ರಮ ಎಸಗಿದ ಸಂಸ್ಥೆಗೇ ಅವಕಾಶ…

    ಪುತ್ತೂರು ಜೂನ್ 19: ಅಕ್ರಮ ವೆಬ್ ಸೈಟ್ ಮೂಲಕ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಹೆಸರಿನಲ್ಲಿ ಆನ್ ಲೈನ್ ಸೇವೆ ಬುಕ್ ಮಾಡುತ್ತಿದ್ದ ಹಾಗೂ ಇದೀಗ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಸಂಸ್ಥೆಗೆ ರಾಜ್ಯ ಸರಕಾರ ದೇವಸ್ಥಾನಗಳ ಆನ್ ಲೈನ್ ಸೇವೆ ನಡೆಸಲು ಅವಕಾಶ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಅರ್ಜುನ್ ರಂಗಾ ಎನ್ನುವ ವ್ಯಕ್ತಿ ನಿರ್ವಹಿಸುತ್ತಿರುವ ಪ್ಯೂರ್ ಪ್ರೇಯರ್ ಎನ್ನುವ ವೆಬ್ ಸೈಟ್ ಸುಬ್ರಹ್ಮಣ್ಯದಲ್ಲಿ ನಡೆಸಲಾಗುತ್ತಿರುವ ಸೇವೆಗಳನ್ನು ಅಕ್ರಮವಾಗಿ ಬುಕ್ ಮಾಡಿ ದೇವಸ್ಥಾನಕ್ಕೆ ವಂಚನೆ ನಡೆಸುತ್ತಿದ್ದ ಪ್ಯೂರ್ ಪ್ರೇಯರ್ ಸೇರಿದಂತೆ ಮೂರು ವೆಬ್ ಸೈಟ್ ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

    ಕುಕ್ಕೆ ಸುಬ್ರಹ್ಮಣ್ಯ ದೇವರ ಮೂಲ ವಿಗ್ರಹ, ಗೋಪುರ, ಉತ್ಸವಾದಿಗಳ ಫೋಟೋಗಳನ್ನು ಬಳಸಿ ಈ ವೆಬ್ ಸೈಟ್ ಮೂಲಕ ಭಕ್ತರಿಂದ ಸೇವೆಗಳನ್ನು ಪಡೆದುಕೊಳ್ಳಲಾಗುತ್ತಿತ್ತು ಎನ್ನುವ ಅಂಶವನ್ನು ದೂರಿನಲ್ಲಿ ದಾಖಲಿಸಲಾಗಿದೆ. 2018 ಅಕ್ಟೋಬರ್ 16 ರಂದು ಕುಕ್ಕೆ ಸುಬ್ರಹ್ಮಣ್ಯದ ಕಾರ್ಯನಿರ್ವಹಣಾಧಿಕಾರಿ ಸೈಬರ್ ಕ್ರೈಮ್ ವಿಭಾಗಕ್ಕೆ ಮೂರು ವೆಬ್ ಸೈಟ್ ಗಳ ವಿರುದ್ಧ ದೂರು ದಾಖಲಿಸಿದ್ದರು.

    ಈ ಮೂರು ವೆಬ್ ಸೈಟ್ ಗಳಲ್ಲಿ ಅರ್ಜುನ್ ರಂಗಾ ಎನ್ನುವ ಮೈಸೂರು ಮೂಲದ ವ್ಯಕ್ತಿಯ ಪ್ಯೂರ್ ಪ್ರೇಯರ್ ಎನ್ನುವ ವೆಬ್ ಸೈಟ್ ಕೂಡಾ ಇದ್ದು, ಪ್ರಕರಣ ಇದೀಗ ಹೈಕೋರ್ಟ್ ನಲ್ಲಿದ್ದು, ಆರೋಪಿ ಸ್ಥಾನದಲ್ಲಿರುವ ಅರ್ಜುನ್ ರಂಗಾ ವಿರುದ್ಧದ ಕ್ರಮಕ್ಕೆ ಕೋರ್ಟ್ ತಡೆಯಾಜ್ಞೆಯನ್ನು ನೀಡಿದೆ. ಆದರೆ ಈ ನಡುವೆ ಕೊರೊನಾ ಲಾಕ್ ಡೌನ್ ಸಮಯದಲ್ಲಿ ಭಕ್ತರಿಗೆ ಪ್ರಮುಖ ಕ್ಷೇತ್ರಗಳ ದೇವರ ದರ್ಶನಕ್ಕೆ ಆನ್ ಲೈನ್ ಮೂಲಕ ವ್ಯವಸ್ಥೆ ಮಾಡುವ ಯೋಜನೆ ಜಾರಿಗೆ ತಂದಿತ್ತು. ಈ ಆನ್ ಲೈನ್ ವ್ಯವಸ್ಥೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಇದೇ ಪ್ಯೂರ್ ಪ್ರೇಯರ್ ಕಂಪನಿಗೆ ನೀಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

    ರಾಜ್ಯದ ಒಟ್ಟು 52 ಪ್ರಮುಖ ದೇವಸ್ಥಾನಗಳ ಸೇವೆಗಳನ್ನು ಆನ್ ಲೈನ್ ಮೂಲಕ ನಿರ್ವಹಿಸಲು ಈ ಸಂಸ್ಥೆಗೆ ಅವಕಾಶ ನೀಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯದಂತಹ ಹೆಸರಾಂತ ಕ್ಷೇತ್ರದ ಹೆಸರಿನಲ್ಲಿ ಅಕ್ರಮವಾಗಿ ಅನ್ ಲೈನ್ ಸೇವೆಗಳನ್ನು ನೀಡುತ್ತಿದ್ದ ಈ ಸಂಸ್ಥೆಯ ವಿರುದ್ಧ ಸರಕಾರವೇ ಪ್ರಕರಣ ದಾಖಲಿಸಿದ್ದು, ಇದೀಗ ಅದೇ ಸಂಸ್ಥೆಗೆ ಅನ್ ಲೈನ್ ಸೇವೆ ನಿರ್ವಹಿಸುವ ಜವಾಬ್ದಾರಿ ನೀಡಿರುವುದರ ವಿರುದ್ಧ ಅಪಸ್ವರಗಳೂ ಕೇಳಿ ಬರಲಾರಂಭಿಸದೆ.

    Share Information
    Advertisement
    Click to comment

    You must be logged in to post a comment Login

    Leave a Reply