LATEST NEWS
ಮಂಗಳೂರು – ದರ್ಗಾ ನವೀಕರಣ ವೇಳೆ ಹಿಂದೂ ಶೈಲಿಯ ದೇವಸ್ಥಾನದ ಗುಡಿ ಪತ್ತೆ
ಮಂಗಳೂರು ಎಪ್ರಿಲ್ 21: ದರ್ಗಾವೊಂದರ ನವೀಕರಣ ಸಂದರ್ಭ ಹಿಂದೂ ದೇವಸ್ಥಾದಲ್ಲಿರುವ ಗುಡಿ ರೀತಿ ಕಟ್ಟಡ ಪತ್ತೆಯಾದ ಘಟನೆ ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಎಂಬಲ್ಲಿ ನಡೆದಿದೆ. ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಇರುವ ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದ ನವೀಕರಣ ಕಾರ್ಯ ನಡೆಯುತ್ತಿದ್ದು, ಈ ಹಿನ್ನಲೆ ದರ್ಗಾದ ಮುಂಭಾಗವನ್ನು ಕೆಡವಲಾಗಿತ್ತು.
ದರ್ಗಾದ ಹಿಂಭಾಗ ದೇವಸ್ಥಾನದ ಕಲಶ, ತೋಮರ, ಕಂಬಗಳ ಮಾದರಿ ಪತ್ತೆಯಾಗಿದ್ದು, ಜೈನ ಅಥವಾ ಹಿಂದೂ ಧರ್ಮಕ್ಕೆ ಸೇರಿದ ದೇವಸ್ಥಾನವಿರೋ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ತಹಶೀಲ್ದಾರ್ ಪುರಂದರ ಹಾಗೂ ವಿಶ್ವ ಹಿಂದೂಪರಿಷತ್ ನ ಮುಖಂಡರು ಪರಿಶೀಲನೆ ನಡೆಸಿದ್ದಾರೆ. ಜಾಗದ ದಾಖಲೆ ಹಾಗೂ ಇತಿಹಾಸದ ಬಗ್ಗೆ ಮಾಹಿತಿ ಕಲೆ ಹಾಕಲು ಜಿಲ್ಲಾಡಳಿತ ಮುಂದಾಗಿದ್ದು, ಸದ್ಯ ದರ್ಗಾದ ನವೀಕರಣ ಕಾಮಗಾರಿ ಸ್ಥಗಿತಕ್ಕೆ ತಹಶಿಲ್ದಾರ್ ಸೂಚನೆ ನೀಡಿದ್ದಾರೆ. ಹಿನ್ನಲೆ ಕೆಲಸ ಸ್ಥಗಿತಗೊಳಿಸಿ ಜಿಲ್ಲಾಡಳಿತದ ನಡೆಗೆ ದರ್ಗಾ ಆಡಳಿತ ಸಮ್ಮತಿ ಸೂಚಿಸಿದೆ.
ಸುಮಾರು 800 ವರ್ಷಗಳ ಇತಿಹಾಸ ಈ ಮಳಲಿ ಮಸೀದಿಗಿದ್ದು, ದೇವಸ್ಥಾನ ಶೈಲಿಯ ಕಟ್ಟಡದಲ್ಲಿ ಸದ್ಯ ಮೌಲ್ವಿಗಳ ವಿಶ್ರಾಂತಿ ಸ್ಥಳವಾಗಿ ಮಾರ್ಪಟ್ಟಿದೆ. ಈ ಹಿಂದೆ ಹಿಂದಿನ ಮೌಲ್ವಿಗಳು ಈ ಸ್ಥಳದಲ್ಲೇ ನಮಾಝ್ ಮಾಡುತ್ತಿದ್ದರು, ಹೀಗಾಗಿ ಈ ಕಟ್ಟಡವನ್ನು ಕೆಡದೇ ಹಾಗೆಯೇ ಉಳಿಸಿಕೊಂಡಿದ್ದೇವೆ ಎಂದು ಆಡಳಿತ ಮಂಡಳಿ ತಿಳಿಸಿದೆ.