LATEST NEWS
ತಲಪಾಡಿ ಬಸ್ ನಿಲ್ದಾಣ ತನಕ ಸಂಚರಿಸಲಿರುವ ಮಂಗಳೂರಿನ ಸಿಟಿ ಬಸ್ ಗಳು…!!
ಮಂಗಳೂರು ಮಾರ್ಚ್ 5: ಕೊನೆಗೂ ಕರ್ನಾಟಕದ ಸಿಟಿ ಬಸ್ ಗಳು ಕೇರಳ ಗಡಿ ಪ್ರವೇಶಗೊಳ್ಳಲು ಪ್ರಾರಂಭಿಸಿವೆ. ತಲಪಾಡಿ ಟೋಲ್ ದರದ ವಿಷಯದಲ್ಲಿ ಎದ್ದಿರುವ ವಿವಾದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಅವರ ಮಧ್ಯಸ್ಥಿಕೆಯಲ್ಲಿ ಸೌಹಾರ್ದಯುತವಾಗಿ ಬಗೆ ಹರಿದಿದ್ದು, ಬಸ್ ಸವಾರರು ನಿಟ್ಟುಸಿರು ಬಿಡುವಂತಾಗಿದೆ. ನ್ನು ಮಂಗಳೂರಿನ ಎಲ್ಲ ಸಿಟಿ ಬಸ್ಸುಗಳು ತಲಪಾಡಿ ಟೋಲ್ ದಾಟಿ ಕೇರಳದ ಲೋಕಲ್ ಬಸ್‌ಗಳು ತಿರುಗುವ ತಲಪಾಡಿ ಬಸ್ ನಿಲ್ದಾಣ ತನಕ ಸಂಚರಿಸಲಿವೆ.
ಸಿಟಿ ಬಸ್‌ಗಳು ಟೋಲ್ ದಾಟಿ 200 ಮೀಟರ್ ದೂರದಲ್ಲಿರುವ ಅಂತಾರಾಜ್ಯ ಬಸ್‌ಗಳು ಸಂಧಿಸುವ ನಿಲ್ದಾಣ ತಲುಪಲು ಪ್ರತೀ ಬಸ್‌ಗೆ ಮಾಸಿಕ 40 ಸಾವಿರ ರೂವಿನಷ್ಟು ಶುಲ್ಕ ಪಾವತಿಸಬೇಕಿತ್ತು. ಇದು ದುಬಾರಿ ಎಂದು ಬಸ್ ಮಾಲೀಕರು ವಿರೋಧ ವ್ಯಕ್ತಪಡಿಸಿ ಟೋಲ್‌ಗೇಟ್‌ಗಿಂತ ಈಚೆಯೇ ಬಸ್ ನಿಲ್ಲಿಸುತ್ತಿದ್ದರು. ಇದರಿಂದ ಬಸ್ ಪ್ರಯಾಣಿಕರು ನಡೆದುಕೊಂಡೇ ಟೋಲ್‌ಗೇಟ್ ದಾಟಿ ಬಸ್ ನಿಲ್ದಾಣ ತಲುಪಬೇಕಿತ್ತು.
ಗುರುವಾರ ಈ ಕುರಿತು ಸಭೆ ನಡೆಸಿದ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಸಮಸ್ಯೆ ಇತ್ಯರ್ಥ ಪಡಿಸಿದ್ದಾರೆ. ಪ್ರತೀ ಬಸ್ ಮಾಸಿಕವಾಗಿ 14 ಸಾವಿರ ರೂ. ಪಾವತಿಸಬೇಕು ಎಂಬ ನಿರ್ಧಾರಕ್ಕೆ ಬಸ್ ಮಾಲೀಕರು ಮತ್ತು ನವಯುಗ ಸಂಸ್ಥೆ ಒಪ್ಪಿಕೊಂಡಿದೆ. ತಲಪಾಡಿ ಟೋಲ್‌ಗೇಟ್ ದಾಟುವ ಪ್ರಯಾಣಿಕರಿಗೆ ಹೆಚ್ಚುವರಿಯಾಗಿ 2 ರೂ. ಟಿಕೆಟ್ ಪಡೆಯಲು ನಿರ್ಧರಿಸಲಾಗಿದೆ.