KARNATAKA
ತಲಕಾವೇರಿ ಬೆಟ್ಟಕುಸಿತ ಇನ್ನೂ ಪತ್ತೆಯಾಗದ ಅರ್ಚಕರ ಕುಟುಂಬ
ಮಡಿಕೇರಿ : ಕೊಡಗಿನ ತಲಕಾವೇರಿಯಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದ ಪರಿಣಾಮ ನಾಪತ್ತೆಯಾಗಿರುವ ಐವರ ಪತ್ತೆಗೆ ತೀವ್ರ ಶೋಧ ಕಾರ್ಯ ಇಂದು ಕೂಡ ಮುಂದುವೆದಿದೆ. ಆದರೆ ಯಾವುದೇ ಕುರುಹುಗಳು ಸಿಕ್ಕಿಲ್ಲ. ನಿನ್ನೆ ಸ್ಥಳೀಯರು ಶೋಧ ಕಾರ್ಯ ನಡೆಸಿದ್ದರೂ ದಟ್ಟ ಮಂಜು ಮತ್ತು ಮಳೆ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.
ಇಂದು ಎನ್ ಡಿ ಆರ್ ಎಫ್ ತಂಡ ಮುಂಜಾನೆಯಿಂದಲೇ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಮಣ್ಣಿನ ತೆರವಿಗೆ ಜೆಸಿಬಿ ಮತ್ತು ಹಿಟಾಚಿಗಳ ನೆರವನ್ನು ಪಡೆಯಲಾಗತ್ತಿದ್ದು ಕೊಡಗು ಜಿಲ್ಲಾಧಿಕಾರಿ, ರಕ್ಷಣಾಧಿಕಾರಿ ಸೇರಿದಂತೆ ಹಿರಿಯ ಅಧಿಕಅರಿಗಳು ಸ್ಥಳದಲ್ಲೇ ಮೊಕ್ಕಂ ಹೂಡಿದ್ದು, ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ.
ರಾಜ್ಯ ಸಚಿವರುಗಳಾದ ಸೋಮಣ್ಣ ಮತ್ತು ಆರ್ ಆಶೋಕ್ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಸುಮಾರು 5 ಎಕರೆ ಪ್ರದೇಶದಲ್ಲಿ ಕುಸಿದ ಮಣ್ಣು ಹರಡಿದಿದ್ದು ಇದರಲ್ಲಿ ತಲಕಾವೇರಿ ದೇವಸ್ಥಾನದ ಅರ್ಚಕರಾದ ನಾರಾಯಣ ಆಚಾರ್, ಪತ್ನಿ ಶಾಂತ ಆಚಾರ್, ಅವರ ಸಹೋದರ ಆನಂದ ತೀರ್ಥ ಸ್ವಾಮಿ , ಸಹಾಯಕ ಅರ್ಚಕರಾದ ಪವನ್ ಮತ್ತು ಬಂಟ್ವಾಳ ರವಿ ಕಿರಣ್ ಸಿಲುಕಿರುವ ಸಾಧ್ಯತೆಗಳಿದ್ದರೂ ಬದುಕಿ ಉಳಿದಿರುವ ಸಾದ್ಯತೆ ತೀರ ಕಡಿಮೆ ಎನ್ನಲಾಗಿದೆ.
ಕಾವೇರಿ ಅಮ್ಮನ ಮಡಿಲು ಬಿಟ್ಟು ಬರಲಾರೆ ಎಂದಿದ್ದ ಅರ್ಚಕರು..!?
ಕಳೆದ ಮಳೆಗಾಲದಲ್ಲಿ ಬೃಹ್ಮಗಿರಿ ಬೆಟ್ಟದ ಈ ಭಾಗದಲ್ಲಿ ಕೊಂಚ ಮಟ್ಟಿನ ಕುಸಿತ ಉಂಟಾಗಿತ್ತು. ಮತ್ತು ಬೆಟ್ಟ ಬಿರುಕು ಬಿಟ್ಟಿತ್ತು. ಆಗ ಬೆಟ್ಟದ ತಪ್ಪಲಿನಲ್ಲಿ ಮನೆ ಮಾಡಿದ್ದ ಪ್ರಧಾನ ಅರ್ಚಕರಾದ ನಾರಾಯಣಾಚಾರ್ ಅವರನ್ನು ಸ್ಥಳ ತೆರವು ಮಾಡಲು ಹಿತೈಷಿಗಳು , ಅಧಿಕಾರಿಗಳು ಮನವಿ ಮಾಡಿದ್ದರು ಎನ್ನಲಾಗಿದೆ. ಆದರೆ ಕಾವೇರಮ್ಮನ ಮಡಿಲು ಬಿಟ್ಟು ಎಲ್ಲಿಗೂ ಹೋಗಲಾರೆ ಎಂದಿದ್ದರು ನಾರಾಯಣ ಆಚಾರ್. ಇದೀಗ ಭೂಕುಸಿತದಿಂದ ಸಮಾಧಿಯಾದ ಮನೆಯೊಳಗೆ ಪ್ರಧಾನ ಅರ್ಚಕರಾದ ನಾರಾಯಣಾಚಾರ್ ಮತ್ತು ಕುಟುಂಬ ಸಿಲುಕಿಕೊಂಡಿದೆ. ಈ ಮಧ್ಯೆ ಭಾಗಮಂಡಲದ ತ್ರಿವೇಣಿ ಸಂಗಮದ ಬಳಿ ಅವರ ಕಾರಿನ ಅವಶೇಷಗಳು ಕೆಲ ಮನೆ ಸಾಮಗ್ರಿಗಳು, ಕೆಲ ಜಾನುವಾರುಗಳ ಅವಶೇಷಗಳು ದೊರಕಿವೆ ಎಂಬ ಮಾಹಿತಿ ಲಭ್ಯವಾಗಿದೆ.