Connect with us

LATEST NEWS

ಪಶ್ಚಿಮಘಟ್ಟದಲ್ಲಿ ಭಾರೀ ಮಳೆಗೆ ಚಾರ್ಮಾಡಿಯಲ್ಲಿ ಗುಡ್ಡ ಕುಸಿತ

ಬೆಳ್ತಂಗಡಿ, ಅಗಸ್ಟ್ 7: ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು, ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಮತ್ತೆ ಗುಡ್ಡ ಕುಸಿತ ಆರಂಭಗೊಂಡಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ.
ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ಸಂಚಾರ ನಿಷೇಧಗೊಂಡಿದ್ದು, ನಿನ್ನೆ ಅಲೆಖಾನ್ ಸಮೀಪ ಗುಡ್ಡ ಕುಸಿತಗೊಂಡ ಪರಿಣಾಮ ಮುಂಜಾನೆ ವೇಳೆ ವಾಹನ ಸಂಚಾರಕ್ಕೆ ಮತ್ತೆ ಅಡ್ಡಿಯಾಗಿದೆ. ಸದ್ಯ ಸ್ಥಳದಲ್ಲಿ ತೆರವು ಕಾರ್ಯಾಚರಣೆ ಸಾಗುತ್ತಿದೆ.


ಇನ್ನು ಕೊಟ್ಟಿಗೆಹಾರ ಬಳಿಯೂ ಭಾರೀ ಮಳೆಯಿಂದ ಚಾರ್ಮಾಡಿ ಘಾಟ್‍ನ ಮಣ್ಣು ರಸ್ತೆ ಕುಸಿದಿದೆ. ರಸ್ತೆಯ ಮೇಲೆ ಬಂಡೆಗಳು, ಮರಗಳು ಉರುಳಿ ಬೀಳುತ್ತಿದ್ದು, ಸವಾರರು ಎಚ್ಚರಿಕೆಯಾಗಿ ಪ್ರಯಾಣಿಸಬೇಕಾಗಿದೆ
ಕಳೆದ ವರ್ಷವೂ ಆಗಸ್ಟ್‌ ತಿಂಗಳಿನಲ್ಲಿ ಹೆಚ್ಚಿನ ಮಳೆಯಿಂದಾಗಿ ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು. ಇದೀಗ ಮತ್ತೆ ಗುಡ್ಡ ಕುಸಿತದ ಬಗ್ಗೆ ವರದಿಯಾಗುತ್ತಿದೆ.

ಭಾರಿ ಮಳೆಗೆ ತುಂಗಾ ನದಿ ನೀರಿನ ಮಟ್ಟ ಏರಿಕೆಯಾಗಿದ್ದು.  ಶೃಂಗೇರಿಯಲ್ಲಿ ನದಿ ತಟದ ಮನೆಗಳಿಗೆ ನೀರು ನುಗ್ಗಿದೆ. ಕಳೆದ ರಾತ್ರಿಯಿಂದಲೇ ತುಂಗಾ ನದಿ ಉಕ್ಕಿ ಹರಿಯುತ್ತಿದ್ದು, ಶೃಂಗೇರಿ ಪಟ್ಟಣದ ಹಲವು ಮನೆಗಳು ಜಲಾವೃತಗೊಂಡಿವೆ. ಮಂಗಳೂರು – ಶೃಂಗೇರಿ ಹೆದ್ದಾರಿ ಮೇಲೆ ನೀರು ಉಕ್ಕಿಹರಿಯುತ್ತಿದ್ದು ಸಂಚಾರ ಸ್ಥಗಿತಗೊಂಡಿದೆ. ರಾತ್ರಿಯಿಂದಲೇ ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ. ಅಗತ್ಯ ವಸ್ತುಗಳ ಸಾಗಾಟಕ್ಕೆ ಮಳೆ ತೀವ್ರ ಅಡ್ಡಿ ಮಾಡಿದೆ.

ಅಪಾಯದ ಮಟ್ಟ ಮೀರಿ ಭದ್ರಾ ನದಿ ಹರಿಯುತ್ತಿದ್ದು, ಎನ್ಆರ್ ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ಬಾಳೆಹೊನ್ನೂರಿನ ಸಂತೆ ಮೈದಾನದ ಕಟ್ಟಡಗಳು, ಮಳಿಗೆಗಳು ಜಲಾವೃತವಾಗಿದೆ. ಬಾಳೆಹೊನ್ನೂರು-ಕಳಸ ಸಂಪರ್ಕ ಕಡಿತಗೊಂಡಿದ್ದು, ರಾತ್ರಿ ಇಡೀ ಸುರಿದ ಮಳೆಗೆ ಜನ ಹೈರಾಣಾಗಿದ್ದಾರೆ.