Connect with us

    LATEST NEWS

    ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಗೆ ರಸ್ತೆಗಳ ಮೇಲೆ ಉರುಳಿದ ಮರ; ಹಲವೆಡೆ ರಸ್ತೆ ಸಂಚಾರ ಬಂದ್

    ಮಂಗಳೂರು ಅಗಸ್ಟ್ 7: ದಕ್ಷಿಣಕನ್ನಡ ಜಿಲ್ಲೆಯ ಹಲವೆಡೆ ಇಂದು ಕೂಡಾ ಭಾರೀ ಮಳೆಯಾಗುತ್ತಿದೆ. ಪಶ್ಚಿಮಘಟ್ಟ ಅಂಚಿನ ಪ್ರದೇಶಗಳಾದ ಸುಬ್ರಹ್ಮಣ್ಯ, ದಿಡುಪೆ, ಮಲವಂತಿಕೆ,ಚಾರ್ಮಾಡಿ ,ಬಿಸಿಲೆ ಮೊದಲಾದ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆ ಹಿನ್ನಲೆಯಲ್ಲಿ ಬಿಸಿಲೆ ಘಾಟ್ ನಲ್ಲಿ ಮತ್ತೆ ಗುಡ್ಡ ಜರಿದಿದ್ದು, ಮರಗಳೂ ರಸ್ತೆಗೆ ಅಡ್ಡಲಾಗಿ ಬಿದ್ದಿವೆ.


    ಬಿಸಿಲೆ ಘಾಟ್ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ- ಬಿಸಿಲೆ ಘಾಟ್ ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ. ಸಕಲೇಶಪುರ,ಶಿರಾಢಿ, ಕುಮಾರಪರ್ವತ ಭಾಗದಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಸತತ ಐದನೇ ದಿನವೂ ಮುಳುಗಡೆಯಾಗಿದೆ.


    ಸ್ನಾನನಘಟ್ಟ ಪರಿಸರದಲ್ಲಿ ನೀರಿ‌ನ ಹರಿವು ಹೆಚ್ಚಾಗುತ್ತಿದ್ದು, ಸ್ನಾನಘಟ್ಟದಲ್ಲಿರುವ ಭಕ್ತರ ಸ್ನಾನಗೃಹ, ಶೌಚಾಲಯ,ಲಗೇಜ್ ಕೊಠಡಿಗಳು ಸಂಪೂರ್ಣ ಜಲಾವೃತವಾಗಿದೆ. ಈ ಭಾಗದಲ್ಲಿ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತಿದ್ದು, ಕುಮಾರಧಾರಾ ನದಿ ನೀರು ರಸ್ತೆಗೆ ಬರುವ ಸಾಧ್ಯತೆಯೂ ಹೆಚ್ಚಾಗಿದೆ. ಇದರಿಂದ ಮಂಜೇಶ್ವರ- ಸುಬ್ರಹ್ಮಣ್ಯ ಅಂತರ್ ರಾಜ್ಯ ಹೆದ್ದಾರಿಯೂ ಬಂದ್ ಆಗುವ ಲಕ್ಷಣ ಗೋಚರಿಸುತ್ತಿದೆ.


    ಜಿಲ್ಲೆಯ‌ ಹಲವೆಡೆ ಮಳೆಯ ಜೊತೆಗೆ ಭಾರೀ‌ ಗಾಳಿಯೂ ಬೀಸುತ್ತಿದ್ದು,ಗಾಳಿಯ ಪರಿಣಾಮ ಮರಗಳು ವಿದ್ಯುತ್ ಕಂಬಗಳ ಮೇಲೆ ಉರುಳುತ್ತಿರುವ ಕಾರಣ‌ ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯದ ಸಮಸ್ಯೆಯೂ ಕಾಡಲಾರಂಭಿಸಿದೆ. ಮಳೆಗೆ ಹಲವು ರಸ್ತೆಗಳೂ ಕುಸಿತಗೊಂಡಿದ್ದು, ಇತ್ತೀಚಿಗೆ ನಿರ್ಮಾಣಗೊಂಡ ಪುತ್ತೂರಿನ ಪಟ್ಟೆ-ಗೆಜ್ಜೆಗಿರಿ- ಈಶರಮಂಗಲ ರಸ್ತೆಯು ಬಹುತೇಕ ಕುಸಿದಿದೆ.

    ಮಳೆಯ ನೀರಿನ ಒಸರಿನಿಂದ ರಸ್ತೆಯ ತಳಪಾಯ ಕುಸಿದ ಪರಿಣಾಮ ರಸ್ತೆಯು ಕೆಲವು ಕಡೆ ಕುಸಿದಿದ್ದರೆ, ಇನ್ನು ಕೆಲವೆಡೆ ಬಿರುಕು ಬಿಟ್ಟಿವೆ. ಅಗಸ್ಟ್ 10 ವರಗೂ ಕರಾವಳಿಯಾದ್ಯಂತ ಭಾರೀ ಮಳೆ- ಗಾಳಿ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ಈಗಾಗಲೇ ನೀಡಿದೆ.

    ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದ ಹಿನ್ನಲೆಯಲ್ಲಿ ನದಿ ನೀರು ಇದೀಗ ಕೃಷಿ ತೋಟಗಳಿಗೂ‌ ನುಗ್ಗಲಾರಂಭಿಸಿದೆ. ನೇತ್ರಾವತಿ ನದಿಯಲ್ಲೂ ನೀರಿನ ಹರಿವು ಹೆಚ್ಚಾಗಿದ್ದು, ಬಂಟ್ವಾಳ, ಪಾಣೆಮಂಗಳೂರು, ಜಪ್ಪಿನಮೊಗರು ಮೊದಲಾದ ಕಡೆಗಳಲ್ಲಿ ನೀರು ನುಗ್ಗುವ ಆತಂಕವೂ ಎದುರಾಗಿದೆ. ನದಿ ಪಾತ್ರದ ಜನರು ಎಚ್ಚರಿಕೆಯಲ್ಲಿರುವಂತೆ ಸೂಚಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply