Connect with us

    LATEST NEWS

    ರೋಹಿಣಿ ಸಿಂಧೂರಿ ವಿರುದ್ದದ ಎಲ್ಲಾ ಪೋಸ್ಟ್ ತೆಗೆಯುವಂತೆ ಐಪಿಎಸ್ ಅಧಿಕಾರಿ ರೂಪಾ ಅವರಿಗೆ ಸುಪ್ರೀಂ ಕೋರ್ಟ್ ತಾಕೀತು

    ನವದೆಹಲಿ ಡಿಸೆಂಬರ್ 15 : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಎಲ್ಲಾ ಪೋಸ್ಟ್ ಶುಕ್ರವಾರದೊಳಗೆ ಡಿಲೀಟ್ ಮಾಡಬೇಕೆಂದು ಸುಪ್ರೀಂಕೋರ್ಟ್ ರೂಪಾ ಅವರಿಗೆ ತಾಕೀತು ಮಾಡಿದೆ.


    ನನ್ನ ವಿರುದ್ಧ ರೋಹಿಣಿ ಸಿಂಧೂರಿ ಹೂಡಿರುವ ಕ್ರಿಮಿನಲ್ ಮಾನನಷ್ಟ ಆರೋಪದ ಖಾಸಗಿ ದೂರನ್ನು ರದ್ದುಪಡಿಸಬೇಕು’ ಎಂದು ಕೋರಿ ಡಿ.ರೂಪಾ ಮೌದ್ಗಿಲ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್‌ ಎಸ್.ಓಕಾ ಹಾಗೂ ಪಂಕಜ್‌ ಮಿತ್ತಲ್ ಅವರನ್ನು ಒಳಗೊಂಡ ಪೀಠವು ಮೌಖಿಕ ನಿರ್ದೇಶನ ನೀಡಿತು.

    ಇಬ್ಬರು ಅಧಿಕಾರಿಗಳು ಮಧ್ಯಸ್ಥಿಕೆ ಮೂಲಕ ತಮ್ಮ ವಿವಾದ ಬಗೆಹರಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ಸಲಹೆ ನೀಡಿತ್ತು. ಮಧ್ಯಸ್ಥಿಕೆ ವಿಫಲವಾಗಿದೆ ಎಂದು ನ್ಯಾಯಾಲಯಕ್ಕೆ ಗುರುವಾರ ತಿಳಿಸಲಾಯಿತು. ಇಬ್ಬರೂ ಅಧಿಕಾರಿಗಳು ನ್ಯಾಯಾಲಯದಲ್ಲಿ ಹಾಜರಾಗಿದ್ದರು. ಕ್ರಿಮಿನಲ್‌ ಪ್ರಕರಣವನ್ನು ಹಿಂಪಡೆಯಲು ಸಿಂಧೂರಿ ಒಪ್ಪಲಿಲ್ಲ.

    ಸಾಮಾಜಿಕ ಜಾಲತಾಣಗಳ ಮೂಲಕ ರೂಪಾ ಅವರು ತಮ್ಮ ಮಾನಹಾನಿ ಮಾಡಿದ್ದಾರೆ ಎಂದು ರೋಹಿಣಿ ಅವರು ಪೀಠಕ್ಕೆ ತಿಳಿಸಿದರು. ‘ನನ್ನ ಕುಟುಂಬದವರನ್ನು ಎಳೆದು ತಂದಿದ್ದು ಏಕೆ? ರಾಜ್ಯದಲ್ಲಿ ನಾನು ಹೇಗೆ ಕೆಲಸ ಮಾಡಲು ಸಾಧ್ಯ?’ ಎಂದು ಅವರು ಪ್ರಶ್ನಿಸಿದರು. ‘ಸಿಂಧೂರಿ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ನೀವು ತನಿಖೆ ನಡೆಸುತ್ತಾ ಇದ್ದೀರಾ’ ಎಂದು ರೂಪಾ ಅವರನ್ನು ಪೀಠ ಪ್ರಶ್ನಿಸಿತು. ಆಗ ರೂಪಾ, ‘ಇಲ್ಲ’ ಎಂದು ಉತ್ತರಿಸಿದರು. ‘ಯಾರೋ ಮಾಡಿದ ಆರೋಪದ ಬಗ್ಗೆ ಮತ್ಯಾರೋ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ನಿಮಗಿರುವ ಹಿತಾಸಕ್ತಿ ಏನು’ ಎಂದು ಪೀಠ ಪ್ರಶ್ನಿಸಿತು. 24 ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳನ್ನು ತೆಗೆದು ಹಾಕುವಂತೆ ಸೂಚಿಸಿತು. ಈ ವಿವಾದಕ್ಕೆ ಕೊನೆ ಹಾಕಲು ಬಯಸಿದ್ದೇವೆ. ಆ ಕಾರಣಕ್ಕೆ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೀಠ ಹೇಳಿತು.

    Share Information
    Advertisement
    Click to comment

    You must be logged in to post a comment Login

    Leave a Reply