Connect with us

    LATEST NEWS

    ಎನ್‍ಎಚ್‍ಎಐ ಉನ್ನತ ಅಧಿಕಾರಿಗೆ ಸಮನ್ಸ್: ಉಸ್ತುವಾರಿ ಕಾರ್ಯದರ್ಶಿ ಸೂಚನೆ

    ಎನ್‍ಎಚ್‍ಎಐ ಉನ್ನತ ಅಧಿಕಾರಿಗೆ ಸಮನ್ಸ್: ಉಸ್ತುವಾರಿ ಕಾರ್ಯದರ್ಶಿ ಸೂಚನೆ

    ಉಡುಪಿ, ಜುಲೈ 21 : ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸದೇ ಇರುವುದರಿಂದ ಪ್ರಾಧಿಕಾರದ ಉನ್ನತ ಅಧಿಕಾರಿಗೆ ಸಮನ್ಸ್ ಕಳುಹಿಸಿ ವಿಚಾರಣೆ ನಡೆಸುವಂತೆ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಸೂಚಿಸಿದ್ದಾರೆ.

    ವಿಷಯ ಪ್ರಸ್ತಾಪಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು, ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದೇ, ಪದೇ ಪದೇ ನಿಗದಿತ ಗಡುವನ್ನು ವಿಸ್ತರಿಸುತ್ತಿದೆ. ಇದರಿಂದ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆಯಲ್ಲದೇ ಸಾರ್ವಜನಿಕರಿಂದಲೂ ವಿರೋಧ ವ್ಯಕ್ತವಾಗುತ್ತಿವೆ. ಈ ಬಗ್ಗೆ ಪ್ರಾಧಿಕಾರದ ಸ್ಥಳೀಯ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಉಸ್ತುವಾರಿ ಕಾರ್ಯದರ್ಶಿಯವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸದ ಉಸ್ತುವಾರಿ ಕಾರ್ಯದರ್ಶಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ದಕ್ಷಿಣ ವಲಯ ಮುಖ್ಯ ವ್ಯವಸ್ಥಾಪಕರಿಗೆ ಸಮನ್ಸ್ ಮಾಡಿ ಕರೆಸಿ, ಕಾಮಗಾರಿ ವಿಳಂಭದ ಬಗ್ಗೆ ವಿಚಾರಿಸುವಂತೆ ನಿರ್ದೇಶಿಸಿದರು.

    ಇಲಾಖಾವಾರು ಪ್ರಗತಿ ಪರಿಶೀಲಿಸಿದ ಮಹೇಶ್ವರ ರಾವ್, ಜಿಲ್ಲೆಯಲ್ಲಿರುವ ಎಲ್ಲಾ ಮರದ ಕಾಲು ಸಂಕಗಳನ್ನು ಕಾಂಕ್ರೀಟ್ ಸಂಕಗಳನ್ನಾಗಿ ಪರಿವರ್ತಿಸಬೇಕು. ಈ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಗಮನಹರಿಸಬೇಕು ಎಂದರು.

    ಬೆಳೆಸಾಲ ಪಡೆಯುವ ಎಲ್ಲಾ ರೈತರು ಬೆಳೆ ವಿಮೆಯನ್ನು ಕಡ್ಡಾಯವಾಗಿ ಮಾಡಬೇಕು. ಇದರಿಂದ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಲು ಅನುಕೂಲವಾಗುತ್ತದೆ. ಈ ಬಗ್ಗೆ ಸಹಕಾರ ಇಲಾಖೆ ಕ್ರಮ ಕೈಗೊಳ್ಳಬೇಕು. ಬೆಳೆ ವಿಮೆ ಮಾಡಲು ಸರಕಾರದ ನಿರ್ದೇಶನ ಇರುವುದರಿಂದ ಜಿಲ್ಲಾ ಸಹಕಾರಿ ಬ್ಯಾಂಕ್(ಡಿಸಿಸಿ)ಗಳು ಬೆಳೆ ವಿಮೆ ಮಾಡುವುದು ಬೇಡ ಎಂದು ನಿರ್ಣಯ ಕೈಗೊಳ್ಳಲು ಬರುವುದಿಲ್ಲ ಎಂದು ಅವರು ತಿಳಿಸಿದರು. ಈಗಾಗಲೇ ಬೆಳೆ ವಿಮೆ ಪಡೆದು ವಿಮಾ ಮೊತ್ತ ಸಿಗಲು ಬಾಕಿ ಇರುವ ರೈತರಿಗೆ ಶೀಘ್ರದಲ್ಲೇ ಬೆಳೆ ವಿಮೆ ಮೊತ್ತ ನೀಡಲಾಗುವುದು.

    ಸಾಲ ಮನ್ನಾ ಫಲಾನುಭವಿಗಳ ಖಾತೆಗೆ ಆಧಾರ್ ಲಿಂಕ್ ಪೂರ್ಣಗೊಳಿಸುವಂತೆ ಮಹೇಶ್ವರ ರಾವ್ ತಿಳಿಸಿದರು.
    ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಘನತ್ಯಾಜ್ಯವನ್ನು ಮೂಲದಲ್ಲೇ ಬೇರ್ಪಡಿಸಿ ವಿಲೇವಾರಿ ಮಾಡುವ ಯೋಜನೆ ಸಮರ್ಪಕವಾಗಿ ಜಾರಿಗೆ ತರಬೇಕು. ಜೈವಿಕ ತ್ಯಾಜ್ಯವನ್ನು ಬಳಸಿಕೊಂಡು ಅನಿಲ ಉತ್ಪಾದನೆ ಮಾಡಲು ನಗರ ಸಂಸ್ಥೆಗಳು ಅಗತ್ಯ ಕ್ರಮ ಕೈಗೊಳ್ಳಲು ಅವರು ತಿಳಿಸಿದರು.

    ಕಡಲಕೊರೆತ ತಡೆಗೋಡೆ ಕಾಮಗಾರಿಗೆ ಸಲ್ಲಿಕೆಯಾಗಿರುವ ಪ್ರಸ್ತಾವನೆಗಳಿಗೆ ತ್ವರಿತವಾಗಿ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಲು ಉಸ್ತುವಾರಿ ಕಾರ್ಯದರ್ಶಿಗಳು ತಿಳಿಸಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *