KARNATAKA
ರಾಜ್ಯ ಸರ್ಕಾರಿ ನೌಕರರಿಗೆ ರಜೆ ಭಾಗ್ಯ : ವಾರಕ್ಕೆ ಐದೇ ದಿನ ಕೆಲಸ
ರಾಜ್ಯ ಸರ್ಕಾರಿ ನೌಕರರಿಗೆ ರಜೆ ಭಾಗ್ಯ : ವಾರಕ್ಕೆ ಐದೇ ದಿನ ಕೆಲಸ
ಬೆಂಗಳೂರು, ಡಿಸೆಂಬರ್ 31 :ಐಟಿ-ಬಿಟಿ, ಎಂ ಎನ್ ಸಿ ಕಂಪೆನಿಗಳು ಹಾಗೂ ಕೇಂದ್ರ ಸರ್ಕಾರಿ ನೌಕರರಿಗೆ ಇರುವಂತೆ ಇನ್ನು ಮುಂದೆ ರಾಜ್ಯದ ಸರ್ಕಾರಿ ನೌಕರರಿಗೂ ಶನಿವಾರ -ಭಾನುವಾರ ರಜಾ ದಿನ.
ರಾಜ್ಯದ ಸರ್ಕಾರಿ ನೌಕರರಿಗೆ ಇನ್ನು ಮುಂದೆ ವಾರದಲ್ಲಿ ಐದು ದಿನ ಮಾತ್ರ ಕೆಲಸ.
ರಾಜ್ಯ ಸರ್ಕಾರಿ ನೌಕರರ ಸಂಘ ಈ ಮನವಿಯನ್ನು 6ನೇ ವೇತನ ಆಯೋಗಕ್ಕೆ ಮಾಡಿಕೊಂಡಿದೆ,
5 ದಿನ ಕೆಲಸ ಹಾಗೂ 2ದಿನ (ಶನಿವಾರ ಮತ್ತು ಭಾನುವಾರ) ರಜಾ ಜಾರಿ ಕುರಿತಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ಸಾಧಕ-ಬಾಧಕಗಳ ಬಗ್ಗೆ ವೇತನ ಆಯೋಗ ಅಧ್ಯಯನ ನಡೆಸುತ್ತಿದೆ.
ವಾರದಲ್ಲಿ ಎರಡು ದಿನ ರಜಾ ನೀಡುವ ಪದ್ಧತಿ ಉತ್ತಮ ಆಡಳಿತಕ್ಕೆ ಪೂರಕವಾಗಲಿದೆ ಎಂದು ಆಯೋಗಕ್ಕೆ ಸರ್ಕಾರಿ ನೌಕರರ ಸಂಘ ಮನವರಿಕೆ ಮಾಡಿದೆ.
ಕೇಂದ್ರ ಸರ್ಕಾರಿ ಕಚೇರಿಗಳು ಹಾಗೂ ಹಲವಾರು ರಾಜ್ಯಗಳ ಸರ್ಕಾರಿ ಕಚೇರಿಗಳಲ್ಲಿ ಈಗಾಗಲೇ ವಾರದಲ್ಲಿ ಐದು ದಿನ ಕೆಲಸ ಪದ್ಧತಿ ಜಾರಿಯಲಿದೆ,
ಕರ್ನಾಟಕದಲ್ಲೂ ಇದೇ ಮಾದರಿ ಪಾಲಿಸಬೇಕು ಎನ್ನುವುದು ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿಯಾಗಿದೆ.
ನೌಕರರ ಮೇಲಿನ ಕೆಲಸದ ಒತ್ತಡ ಕಡಿಮೆ ಮಾಡಲು ಹಾಗೂ ಸರ್ಕಾರಿ ನೌಕರರು ಖನ್ನತೆಗೆ ಒಳಗಾಗವುದನ್ನು ತಪ್ಪಿಸಲು ಈ ಪದ್ಧತಿ ಅಗತ್ಯ ಎಂದು ಸಂಘವು ವೇತನ ಆಯೋಗದ ಮುಂದೆ ತನ್ನ ನಿಲುವನ್ನು ಪ್ರತಿಪಾದಿಸಿದೆ.
ಸರ್ಕಾರ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದಲ್ಲಿ ಸರ್ಕಾರಿ ನೌಕರರು ಸಹ ವಾರದಲ್ಲಿ 2 ದಿನ ರಜೆಯ ಮಜಾ ಅನುಭವಿಸುವ ಕಾಲ ದೂರವಿಲ್ಲ.
ಇದೇ ಮುಂಬರುವ ರಾಜ್ಯ ಬಜೆಟ್ ಸಂದರ್ಭ ಸರ್ಕಾರದ ಅಧಿಕೃತ ಘೋಷಣೆ ಈ ಸಂಬಂಧ ಹೊರ ಬೀಳುವ ನಿರೀಕ್ಷೆ ಇದೆ.
ತಮಿಳುನಾಡು, ಗೋವಾ, ಬಿಹಾರ, ದೆಹಲಿ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಈಗಾಗಲೇ ವಾರದಲ್ಲಿ 5 ದಿನ ಕೆಲಸ 2 ದಿನ ರಜೆ ಪದ್ಧತಿ ಜಾರಿಯಲ್ಲಿದೆ.
ವಾರದ ಐದು ದಿನವಷ್ಟೇ ಕೆಲಸವಾಗಿದ್ದರಿಂದ ಪ್ರತಿದಿನದ ಕೆಲಸದ ಸಮಯವನ್ನು ಹೆಚ್ಚಿಸಲಾಗಿದ್ದು, ಬೆಳಗ್ಗೆ 9.30 ರಿಂದ ಸಂಜೆ 6 ವರೆಗೆ ಅಲ್ಲಿ ಸರ್ಕಾರಿ ಕಚೇರಿಗಳು ತೆರೆದಿರುತ್ತವೆ.
ರಾಜ್ಯದಲ್ಲಿಯೂ ಸಹ ವಾರದಲ್ಲಿ 2 ದಿನ ರಜೆಯನ್ನುಉ ನೀಡುವ ಪದ್ಧತಿಯನ್ನು ಜಾರಿಗೊಳಿಸಿ, ಉಳಿದ ಐದು ದಿನದ ಕೆಲಸದ ಅವಧಿಯನ್ನು ಹೆಚ್ಚಳ ಮಾಡಲು ಸರ್ಕಾರಿ ನೌಕರರ ಸಂಘ ತನ್ನ ಸಹಮತ ವ್ಯಕ್ತಪಡಿಸಿದೆ.
ಪ್ರತಿ ಭಾನುವಾರದ ಜೊತೆಗೆ ಪ್ರತಿ ಶನಿವಾರ ಸರ್ಕಾರಿ ರಜೆ ನೀಡಿ ಉಳಿದ ದಿನಗಳಲ್ಲಿ ಕೆಲಸದ ಸಮಯವನ್ನು ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆ ತನಕ ಹೆಚ್ಚಿಸಿದರೆ ಶನಿವಾರ ರಜೆ ನೀಡುವುದರಿಂದ ಆಗುವ ಕೆಲಸದ ಒತ್ತಡವನ್ನು ನಿಭಾಯಿಸಬಹುದು ಎಂಬುವುದು ಸರ್ಕಾರಿ ನೌಕರರ ಸಂಘದ ವಾದವಾಗಿದೆ.