ಉತ್ತರ ಕರ್ನಾಟಕದ ಆಡು ಭಾಷೆನೇ ಹಾಗೇ ಆಡುಮಾತಿಗೆ ಯಾರೂ ತಪ್ಪು ಭಾವಿಸಲ್ಲ – ಶ್ರೀರಾಮುಲು

ಉಡುಪಿ ಸೆಪ್ಟೆಂಬರ್ 27: ಮಹೇಶ್ ಕುಮಟಳ್ಳಿಗೆ ಡಿಸಿಎಂ ಲಕ್ಷ್ಮಣ ಸವದಿ ಅವಮಾನ ವಿಚಾರದ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ನಗೆ ಚಟಾಕಿ ಹಾರಿಸುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಲು ಆಗಮಿಸಿದ್ದ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಹೇಶ್ ಕುಮಟಳ್ಳಿಗೆ ಲಕ್ಷ್ಮಣ ಸವದಿ ಅವಮಾನ ಅದೇನೂ ಗಂಭೀರ ವಿಚಾರ ಅಲ್ಲ, ಉತ್ತರ ಕರ್ನಾಟಕದ ಆಡು ಭಾಷೆನೇ ಹಾಗೇ, ನಮ್ ಕಡೆ ಹೆಂಗ್ ಮಾತಾಡ್ತಾರೆ ಅಂತ ನೀವು ಊಹಿಸಲೂ ಸಾಧ್ಯ ಇಲ್ಲ, ನಮ್ಮ ಆಡುಮಾತಿಗೆ ಯಾರೂ ತಪ್ಪು ಭಾವಿಸಲ್ಲ ಎಂದು ಹೇಳಿದ ಅವರು ಈ ಕಡೆ ಮಂದಿ ನಮ್ಮ‌ಮಾತು ಕೇಳಿದ್ರೆ ಎದೆ ಹೊಡ್ಕೋತೀರಿ ಎಂದು ನಗೆ ಚಟಾಕಿ ಹಾರಿಸಿದರು.

ಡಿಸಿಎಂ ಲಕ್ಷ್ಮಣ ಸವದಿಯವರು ಉದ್ದೇಶ ಪೂರ್ವಕವಾಗಿ ಮಾತಾಡಿರಲ್ಲ, ಇನ್ನೂ ಬೇರೆ ಬೇರೆ ಶಬ್ದ ಮಾತಾಡಿರ್ತೀವಿ, ನಮ್ ಕಡೆ ಮಂದಿ‌ ಅಭ್ಯಾಸ ಅಷ್ಟೇ, ಕುಮಟಳ್ಳಿಯವರು ಮಿಸ್ ಅಂಡರ್ ಸ್ಟಾಡಿಂಗ್ ಮಾಡ್ಕೊಂಡಿರಬಹುದು ಎಂದು ಹೇಳಿದ ಅವರು ಕುಮ್ಠಳ್ಳಿನೂ ನಮ್ಮ ಸ್ನೇಹಿತರು, ಸವದಿ ಕೂಡಾ ನಮ್ಮ ಸ್ನೇಹಿತರು, ಏನಾದ್ರೂ ಗೊಂದಲ‌ ಇದ್ರೆ ಸರಿಪಡಿಸುವ ಕೆಲಸ ಮಾಡುವೆ ಎಂದರು.

ಸಂಪುಟ ವಿಸ್ತರಣೆ ವೇಳೆ ಡಿಸಿಎಂ ಆಗೋ ಸೂಚನೆ ಇದ್ಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಕೃಷ್ಣನ ದಯೆ ಹೇಗಿದ್ಯೋ ನೋಡೋಣ ಎಂದರು.