ಸರಕಾರದ ಆದೇಶ ಇಲ್ಲದೆ ಫೋನ್ ಕದ್ದಾಲಿಕೆ ಮಾಡುವುದು ತಪ್ಪು- ಗೃಹಸಚಿವ ಬಸವರಾಜ್ ಬೊಮ್ಮಾಯಿ

ಉಡುಪಿ ಸೆಪ್ಟೆಂಬರ್ 27: ಸಿಬಿಐ ವಿಚಾರಣೆ ವೇಳೆ ಐಪಿಎಸ್ ಅಧಿಕಾರಿ ಅಲೋಕ್ ಅವರು ಹೇಳಿರುವ ಮಾಹಿತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹಸಚಿವ ಬಸವರಾಜ್ ಬೊಮ್ಮಾಯಿ ಸರಕಾರದ ಆದೇಶವಿಲ್ಲದೇ ಫೋನ್ ಕದ್ದಾಲಿಕೆ ಮಾಡಿದ್ದರೆ ಅದು ತಪ್ಪು ಎಂದು ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿಯಾಗಿ ಅಧಿಕಾರವಹಿಸಿಕೊಂಡ ನಂತರ ಮೊದಲ ಬಾರಿಗೆ ಉಡುಪಿಗೆ ಆಗಮಿಸಿದ ಸಂದರ್ಭ ಮಾತನಾಡಿದ ಅವರು ತನಿಖೆಯ ಎಲ್ಲಾ ಮಾಹಿತಿಗಳು ಸಿಬಿಐ ಬಳಿ ಇರುತ್ತವೆ. ಅಧಿಕೃತವಾಗಿ ಯಾವುದೇ ಮಾಹಿತಿ ನಮಗೆ ಬಂದಿಲ್ಲ. ಗೃಹ ಸಚಿವನಾಗಿ ಊಹಾಪೋಹಕ್ಕೆ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಎಸ್‍ಐಟಿ ಮಾಡಿರುವ ತನಿಖೆಯ ಸಂಪೂರ್ಣ ವಿವರ ಸಿಬಿಐಗೆ ನೀಡಿದ್ದೇವೆ. ಆದರೆ ಅನುಮತಿ ಇಲ್ಲದೆ ಯಾವುದೇ ವ್ಯಕ್ತಿಯ ಖಾಸಗಿ ಮಾತುಕತೆಯ ಕದ್ದಾಲಿಕೆ ಮಾಡುವುದು ತಪ್ಪು ಎಂದಿದ್ದಾರೆ.

ಪ್ರಭಾವ ಬಳಸಿ ಉಪ ಚುನಾವಣೆ ಮುಂದೂಡಲಾಗಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪದ ಕುರಿತು ಪ್ರಶ್ನೆ ಕೇಳಿದ್ದಕ್ಕೆ ಉತ್ತರಿಸಿದ ಬೊಮ್ಮಾಯಿ, ಕುಮಾರಸ್ವಾಮಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಸುಪ್ರೀಂ ಆದೇಶದ ಬಗ್ಗೆ, ಚುನಾವಣಾ ಆಯೋಗದ ಬಗ್ಗೆ ಪ್ರತಿಕ್ರಿಯೆ ನೀಡಲಾರೆ ಎಂದರು.

Facebook Comments

comments