FILM
ಕ್ಷಮೆ ಇರಲಿ ಕರ್ನಾಟಕ ನಿಮ್ಮ ಮೇಲೆ ನನಗೆ ಇರುವ ಪ್ರೀತಿ ನನ್ನ ಅಹಂಕಾರಕ್ಕಿಂತಲೂ ದೊಡ್ಡದು – ಕನ್ನಡಿಗರ ಕ್ಷಮೆ ಕೇಳಿದ ಸೋನು ನಿಗಮ್

ಬೆಂಗಳೂರು ಮೇ 05: ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹೇಳಿ ಎಂದು ಕೇಳಿದ್ದಕ್ಕೆ ಅದನ್ನು ಪಹಲ್ಗಾಮ್ ಉಗ್ರರ ದಾಳಿಗೆ ಹೋಲಿಸಿದ್ದ ಗಾಯಕ ಸೋನು ನಿಗಮ್ ತಾವು ಹೇಳಿದ ಮಾತಿಗೆ ಕೊನೆಗೂ ಕ್ಷಮೆ ಕೇಳಿದ್ದಾರೆ.
ಕ್ಷಮೆ ಇರಲಿ ಕರ್ನಾಟಕ. ನಿಮ್ಮ ಮೇಲೆ ನನಗೆ ಇರುವ ಪ್ರೀತಿ ನನ್ನ ಅಹಂಕಾರಕ್ಕಿಂತಲೂ ದೊಡ್ಡದು. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ’ ಎಂದು ಸೋನು ನಿಗಮ್ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಅವರು ವಿವಾದ ಅಂತ್ಯಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಸೋನು ನಿಗಮ್ ಮಾಡಿರುವ ಈ ಪೋಸ್ಟ್ ವೈರಲ್ ಆಗುತ್ತಿದೆ.
ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಸುವಾಗ ಸೋನು ನಿಗಮ್ ನೀಡಿದ್ದ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿತ್ತು. ‘ಕನ್ನಡ ಕನ್ನಡ ಎನ್ನುವುದಕ್ಕೇ ಪಹಲ್ಗಾಮ್ ಘಟನೆ ನಡೆದಿದ್ದು’ ಎಂದು ಅವರು ಹೇಳಿದ್ದರು. ಅವರ ಹೇಳಿಕೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು. ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಲಾಗಿತ್ತು.

ಸೋನು ನಿಗಮ್ ಮಾತಿಗೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಾಷ್ಟ್ರಮಟ್ಟದಲ್ಲಿ ಸುದ್ದಿ ಆಗಿತ್ತು. ಆಗ ಸೋನು ನಿಗಮ್ ಅವರು ಕ್ಷಮೆ ಕೇಳುವ ಬದಲು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದರು. ಆಗ ಅವರ ವಿರುದ್ಧ ಇನ್ನಷ್ಟು ಆಕ್ರೋಶ ವ್ಯಕ್ತವಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಸಿ, ಸೋನು ನಿಗಮ್ ಅವರನ್ನು ಬ್ಯಾನ್ ಮಾಡುವ ಬಗ್ಗೆ ಚರ್ಚಿಸಲಾಯಿತು. ಅದರ ಬೆನ್ನಲ್ಲೇ ಸೋನು ನಿಗಮ್ ಅವರು ಕ್ಷಮೆ ಕೇಳಿದ್ದಾರೆ.