LATEST NEWS
ಹೆಬ್ಬಾವಿನ ಮರಿಗಾಗಿ 275 ಕೋಟಿ ಮೊತ್ತದ ಸೋಲಾರ್ ಪ್ಲಾಂಟ್ ಕಾಮಗಾರಿ ಸ್ಥಗಿತ………..!!
ಆನೆ ಕೊಂದು ಟೀಕೆಗೆ ಗುರಿಯಾಗಿದ್ದ ಕೇರಳದಲ್ಲಿ ವನ್ಯಪ್ರೇಮ
ಕಾಸರಗೋಡು, ಜೂನ್ 8: ಹಳ್ಳಿಗಳಲ್ಲಿ ಹೆಬ್ಬಾವು ಕಾಟ ಕಾಮನ್. ಕೋಳಿ ಹಿಡಿಯಲು ಬಂದ ಹೆಬ್ಬಾವುಗಳನ್ನು ಹಿಡಿದು ಕಾಡಿಗೆ ಬಿಡೋದನ್ನು ಕೇಳಿರಬಹುದು. ಅದೇ ಹೆಬ್ಬಾವಿನ ಸಂತತಿ ಉಳಿಸುವುದಕ್ಕಾಗಿ 275 ಕೋಟಿ ಮೊತ್ತದ ಸೋಲಾರ್ ಪ್ಲಾಂಟ್ ಕಾಮಗಾರಿ ಸ್ಥಗಿತಗೊಳಿಸಿದ್ದು ಕೇಳಿದ್ದೀರಾ..
ಆನೆ ಕೊಂದ ವಿಚಾರದಲ್ಲಿ ಭಾರೀ ಟೀಕೆಗೆ ಗುರಿಯಾಗಿದ್ದ ಕೇರಳದಲ್ಲಿ ಅರಣ್ಯಾಧಿಕಾರಿಯೊಬ್ಬರು ಹೆಬ್ಬಾವಿನ ರಕ್ಷಣೆಗಾಗಿ ಸೋಲಾರ್ ಘಟಕದ ಕಾಮಗಾರಿಯನ್ನೇ ಒಂಬತ್ತು ದಿನಗಳ ಕಾಲ ಸ್ಥಗಿತಗೊಳಿಸಿದ್ದಾರೆ. ಇದು ನಡೆದಿದ್ದು ಗಡಿಜಿಲ್ಲೆ ಕಾಸರಗೋಡಿನ ಪೈವಳಿಕೆಯಲ್ಲಿ. ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದಲ್ಲಿ ಗಡಿ ಹಂಚಿಕೊಂಡಿರುವ ಪೈವಳಿಕೆಯ ಕೊಮ್ಮಂಗಲ ಏರಿಯಾದಲ್ಲಿ 50 ಮೆಗಾ ವ್ಯಾಟ್ ಸಾಮರ್ಥ್ಯದ ಸೋಲಾರ್ ಸೌರ ವಿದ್ಯುತ್ ಘಟಕದ ಕಾಮಗಾರಿ ನಡೆಯುತ್ತಿದೆ.
450 ಎಕ್ರೆ ವ್ಯಾಪ್ತಿಯಲ್ಲಿ ಭೂಮಿ ಸ್ವಾಧೀನ ಪಡಿಸಿ ಜಾಗ ಸಮತಟ್ಟು ಮಾಡುವ ಕೆಲಸ ನಡೆಯುತ್ತಿದೆ. ಈ ಸಂದರ್ಭ ಜೆಸಿಬಿ ಕಾಮಗಾರಿ ನಡೆಸುತ್ತಿದ್ದಾಗ ಗುಡ್ಡದ ಅಡಿಭಾಗದಲ್ಲಿ ಹೆಬ್ಬಾವು ಮೊಟ್ಟೆಗಳನ್ನಿಟ್ಟಿದ್ದು ಕಂಡುಬಂದಿತ್ತು. ಈ ಬಗ್ಗೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಾಸರಗೋಡು ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್, ಹೆಬ್ಬಾವಿನ ಸಂತತಿ ರಕ್ಷಣೆಗಾಗಿ ಕಾಮಗಾರಿ ಸ್ಥಗಿತಗೊಳಿಸಲು ಸೂಚನೆ ನೀಡಿದ್ದಾರೆ.
ಕೇರಳದ ಇಲೆಕ್ಟ್ರಿಸಿಟಿ ಬೋರ್ಡ್ ವತಿಯಿಂದ ನಡೆಸಲಾಗುತ್ತಿರುವ ಕಾಮಗಾರಿಯನ್ನು ಅರಣ್ಯಾಧಿಕಾರಿ ಸೂಚನೆಯಂತೆ ಒಂಬತ್ತು ದಿನಗಳ ಕಾಲ ಸ್ಥಗಿತಗೊಳಿಸಲಾಯ್ತು. ಕಳೆದ ಮೇ 27ರಂದು ಹೆಬ್ಬಾವಿನ ಮರಿಗಳು ಮೊಟ್ಟೆ ಒಡೆದು ಹೊರಬಂದಿದ್ದವು. ಒಟ್ಟು 36 ಮರಿಗಳಿದ್ದ ಹೆಬ್ಬಾವಿನ ಕುಟುಂಬವನ್ನು ಅರಣ್ಯಾಧಿಕಾರಿ ಬಳಿಕ ಸುರಕ್ಷಿತವಾಗಿ ಕಾಡಿಗೆ ಒಯ್ದು ಬಿಟ್ಟಿದ್ದಾರೆ.
ಆ ಮೂಲಕ ಜೆಸಿಬಿಯ ಬಾಯಿಗೆ ಸಿಕ್ಕಿ ನಿರ್ನಾಮ ಆಗುತ್ತಿದ್ದ ಹೆಬ್ಬಾವು ಮತ್ತು ಮರಿಗಳಿಗೆ ಅರಣ್ಯಾಧಿಕಾರಿ ಜೀವದಾನ ಮಾಡಿದ್ದಾರೆ. ಅರಣ್ಯಾಧಿಕಾರಿಯೊಬ್ಬ ನೈಜ ವನ್ಯಜೀವಿ ಪ್ರೇಮಿಯಾಗಿ ಕಾಣಿಸಿಕೊಂಡಿದ್ದಲ್ಲದೆ, ಒಂದು ವನ್ಯಜೀವಿಯ ಉಳಿವಿಗಾಗಿ ದೊಡ್ಡ ಪವರ್ ಪ್ರಾಜೆಕ್ಟನ್ನೂ ಒಮ್ಮೆಗೆ ನಿಲ್ಲಿಸಬಲ್ಲೆ ಎಂದು ತೋರಿಸಿಕೊಟ್ಟಿದ್ದಾರೆ.
ಒಂಬತ್ತು ದಿನಗಳ ಕಾಲ ಕಾಮಗಾರಿ ಸ್ಥಗಿತಗೊಳಿಸಿದ್ದರಿಂದ ಅಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಕೆಲಸಗಾರರಿಗೆ ತೊಡಕಾಗಿದ್ದನ್ನು ಹೆಬ್ಬಾವಿನ ಜೀವದ ಮುಂದೆ ಲೆಕ್ಕಕ್ಕಿಲ್ಲ ಎಂದು ಅಧಿಕಾರಿ ತೋರಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.