KARNATAKA
ನೆಲಮಂಗಲ – ವೋಲ್ವೋ ಕಾರಿನ ಮೇಲೆ ಬಿದ್ದ ಕಂಟೈನರ್ ಲಾರಿ – ಇಬ್ಬರು ಮಕ್ಕಳು ಸೇರಿ 6 ಮಂದಿ ಸಾವು
ನೆಲಮಂಗಲ ಡಿಸೆಂಬರ್ 21: ಹೊಸದಾಗಿ ಖರೀದಿಸಿದ್ದ ವೋಲ್ವೊ ಕಾರಿನ ಮೇಲೆ ಕಂಟೈನರ್ ಒಂದು ಬಿದ್ದ ಪರಿಣಾಮ ಕಾರಿನಲ್ಲಿ ಇಬ್ಬರು ಮಕ್ಕಳು ಸೇರಿ ಆರು ಮಂದಿ ಸ್ಥಳದಲ್ಲೇ ಸಾವನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ ನಾಲ್ಕರ ನೆಲಮಂಗಲದ ಬಳಿ ನಡೆದಿದೆ.
ಒಂದೇ ಕುಟುಂಬದ 6 ಜನರ ಗುರುತು ಪತ್ತೆ ಮಾಡಲಾಗಿದೆ. ಪತಿ ಚಂದ್ರಮ್ ಏಗಪ್ಪಗೋಳ್(46), ಪತ್ನಿ ಧೋರಾಬಾಯಿ(40), ಪುತ್ರ ಗ್ಯಾನ್(16), ಪುತ್ರಿಯರಾದ ದೀಕ್ಷಾ(10), ಆರ್ಯ(6) ಚಂದ್ರಮ್ ಏಗಪ್ಪಗೋಳ್ ಸಹೋದರನ ಪತ್ನಿ ವಿಜಯಲಕ್ಷ್ಮೀ(35) ಮೃತ ದುರ್ವೈವಿಗಳು.
ಏಕಾಏಕಿ ಕಂಟೈನರ್ ಲಾರಿ ಕಾರಿನ ಮೇಲೆ ಬಿದ್ದಿದ್ದರಿಂದ ಕಾರು ಅಪ್ಪಚ್ಚಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ತಾಳೇಕೆರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸರಣಿ ಅಪಘಾತ ಸಂಭವಿಸಿದೆ.
ಲಾರಿ ತುಮಕೂರಿನಿಂದ ಬೆಂಗಳೂರಿಗೆ ಬರುತ್ತಿತ್ತು. ಮುಂದೆ ಬಂದ ಕಾರಿಗೆ ಡಿಕ್ಕಿಯಾಗುವುದನ್ನ ತಪ್ಪಿಸಲು ಚಾಲಕ ಲಾರಿಯನ್ನು ರೈಟ್ ಸೈಡ್ಗೆ ತೆಗೆದುಕೊಂಡಿದ್ದಾನೆ. ಪರಿಣಾಮ ಲಾರಿ ಬೆಂಗಳೂರಿನಿಂದ ತುಮಕೂರಿಗೆ ಹೋಗುತ್ತಿದ್ದ ರಸ್ತೆಗೆ ಬಂದು ಕಾರಿನ ಮೇಲೆ ಬಿದ್ದಿದೆ.
ಚಂದ್ರಮ್ ಏಗಪ್ಪಗೋಳ್ ಮೂಲತಃ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮದ ನಿವಾಸಿಗಳಾಗಿದ್ದು, ಇವರು ಬೆಂಗಳುರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಿದ್ದರು. ಚಂದ್ರಮ್ ಏಗಪ್ಪಗೋಳ್ IAST ಸಾಫ್ಟ್‌ವೇರ್ ಕಂಪನಿ ಮಾಲೀಕರಾಗಿದ್ದರು.