LATEST NEWS
ಇನ್ಮುಂದೆ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗೆ ಒಂದೇ ಚಾರ್ಜರ್?
ನವದೆಹಲಿ, ಆಗಸ್ಟ್ 10: ಸರ್ಕಾರದ ನಿರ್ಧಾರಕ್ಕೆ ಕಂಪನಿಗಳು ಒಪ್ಪಿಗೆ ನೀಡಿದರೆ ಭಾರತದಲ್ಲೂ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗಳಲ್ಲಿ ಇನ್ನು ಮುಂದೆ ಒಂದೇ ರೀತಿಯ ಚಾರ್ಜರ್ ಅನ್ನು ಬಳಕೆ ಮಾಡಬಹುದು.
ಲ್ಯಾಪ್‌ಟ್ಯಾಪ್, ಮೊಬೈಲ್, ಟ್ಯಾಬ್ಲೆಟ್‌ಗಳಿಗೆ ಒಂದೇ ರೀತಿಯ ಚಾರ್ಜರ್ ಪೋರ್ಟ್ ಕಡ್ಡಾಯ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಆ.17 ರಂದು ಗ್ರಾಹಕ ಸಚಿವಾಲಯ ಮೊಬೈಲ್ ತಯಾರಕಾ ಕಂಪನಿಗಳ ಜೊತೆ ಸಭೆ ನಡೆಸಲು ಮುಂದಾಗಿದೆ.
ಫೀಚರ್ ಫೋನ್‌ಗಳಿಗೆ ಮಾತ್ರ ಪ್ರತ್ಯೇಕ ಚಾರ್ಜಿಂಗ್ ಹೊರತುಪಡಿಸಿ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್, ಇಯರ್ ಬಡ್ ನಂತಹ ಸಾಧನಗಳಿಗೆ ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್ ನೀಡುವುದು ಸರ್ಕಾರ ಉದ್ದೇಶ. ಭಾರತ ವಿಶ್ವದ ಎರಡನೇ ಅತಿ ದೊಡ್ಡ ಮೊಬೈಲ್ ಮಾರುಕಟ್ಟೆಯಾಗಿರುವ ಕಾರಣ ದೇಶದಲ್ಲಿ ಇ-ತ್ಯಾಜ್ಯಗಳ ಪ್ರಮಾಣ ಹೆಚ್ಚಾಗುತ್ತಿದೆ. ಇ -ತ್ಯಾಜ್ಯಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗ ಮಹತ್ವದ ಹೆಜ್ಜೆಯನ್ನು ಇರಿಸಿದೆ.
ಅಮೆರಿಕ ಮತ್ತು ಯುರೋಪ್‌ನಲ್ಲಿ ಕಂಪನಿಗಳು ಒಂದೇ ರೀತಿಯ ಚಾರ್ಜಿಂಂಗ್ ಪೋರ್ಟ್ ನೀಡಲು ಸಾಧ್ಯವಾದರೆ ಭಾರತದಲ್ಲಿ ಯಾಕೆ ಸಾಧ್ಯವಿಲ್ಲ?. ಭಾರತ ಈಗಲೇ ಈ ಬದಲಾವಣೆ ಮಾಡದೇ ಇದ್ದಲ್ಲಿ ಆ ಉತ್ಪನ್ನಗಳು ನಮ್ಮ ದೇಶಕ್ಕೆ ಬರುವ ಸಾಧ್ಯತೆಯಿದೆ ಎಂದು ಗ್ರಾಹಕ ಸಚಿವಾಲಯದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
2009ರಲ್ಲಿ 30ಕ್ಕೂ ಹೆಚ್ಚು ಮಾದರಿಯ ಚಾರ್ಜರ್‌ಗಳು ಬಳಕೆಯಲ್ಲಿದ್ದವು. ಆದರೆ ಈಗ ಕಂಪನಿಗಳು ಯುಎಸ್‍ಬಿ ಸಿ, ಲೈಟ್ನಿಂಗ್ ಮತ್ತು ಯುಎಸ್‍ಬಿ ಮೈಕ್ರೋ-ಬಿ ಚಾರ್ಜರ್ ಗಳನ್ನು ನೀಡುತ್ತಿವೆ. ವೈರ್‌ಲೆಸ್ ಚಾರ್ಜರ್‌ಗಳಿಗೆ ಯಾವುದೇ ಸಮಸ್ಯೆ ಇಲ್ಲ. ಆಂಡ್ರಾಯ್ಡ್ ಫೋನುಗಳ ಪೈಕಿ ಕೆಲವು ಈಗ ಯುಎಸ್‍ಬಿ ಮೈಕ್ರೋ ಬಿ ಪೋರ್ಟ್ ನಲ್ಲಿ ಬಿಡುಗಡೆಯಾಗಿದ್ದರೆ, ಕೆಲವು ಕಂಪನಿಗಳು ಯುಎಸ್‍ಬಿ ಟೈಪ್ ಸಿ ಪೋರ್ಟ್‌ನಲ್ಲಿ ಫೋನುಗಳನ್ನು ಬಿಡುಗಡೆ ಮಾಡುತ್ತಿವೆ. ಯುರೋಪಿಯನ್ ಒಕ್ಕೂಟದ ತೀರ್ಮಾನಕ್ಕೆ ಆಪಲ್ ಕಂಪನಿ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿತ್ತು. ಇದು ಆವಿಷ್ಕಾರಕ್ಕೆ ಹಿನ್ನಡೆಯಾಗುತ್ತದೆ ಎಂದು ಹೇಳಿತ್ತು.
ಯುಎಸ್‍ಬಿ-ಸಿ ಮಾದರಿಯ ಚಾರ್ಜಿಂಗ್ ಪೋರ್ಟ್ ಹೊರತು ಪಡಿಸಿ ಬೇರೆ ಯಾವುದೇ ಪೋರ್ಟ್ ಇರುವ ಫೋನುಗಳನ್ನು 2024ರ ನಂತರ ಯುರೋಪಿಯನ್ ಒಕ್ಕೂಟ ದೇಶಗಳಲ್ಲಿ ಮಾರಾಟ ಮಾಡಿದರೆ ಅದನ್ನು ಅಕ್ರಮ ಮಾರಾಟ ಎಂದು ಪರಿಗಣಿಸಲಾಗುತ್ತದೆ.