Connect with us

LATEST NEWS

ಉದ್ಧವ್‌‌ ಕುರಿತ ಕಾರ್ಟೂನ್‌ ಫಾರ್ವರ್ಡ್‌ ಮಾಡಿದ ಮಾಜಿ ನೌಕಾಧಿಕಾರಿ ಮೇಲೆ ಹಲ್ಲೆ

ಮುಂಬೈ: ನೌಕಾಪಡೆಯ ಮಾಜಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಶಿವಸೇನಾ ಶಾಖಾ ಪ್ರಮುಖ್ ಸೇರಿದಂತೆ ಆರು ಮಂದಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಬಗ್ಗೆ ಗೇಲಿ ಮಾಡಿರುವ ಕಾರ್ಟೂನ್ ಹಂಚಿಕೊಂಡಿದ್ದಕ್ಕಾಗಿ ಶಿವಸೇನಾ ಕಾರ್ಯಕರ್ತರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಿವೃತ್ತ ನೌಕಾಧಿಕಾರಿ ಶುಕ್ರವಾರ ದೂರು ದಾಖಲಿಸಿದ್ದರು.

ಮುಂಬೈನ ಸಮತಾ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್ ದಾಖಲಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಹೆಚ್ಚುವರಿ ಆಯುಕ್ತ ದಿಲೀಪ್ ಸಾವಂತ್ ಅವರು ದಾಳಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.

ಇದಾದ ಕೆಲವೇ ಗಂಟೆಗಳಲ್ಲಿ, ಶಿವಸೇನಾ ಸ್ಥಳೀಯ ಶೇಖಾ ಪ್ರಮುಖ್ ಕಮಲೇಶ್ ಕದಮ್ ಮತ್ತು ಪಕ್ಷದ ಕಾರ್ಯಕರ್ತ ಸಂಜಯ್ ಮಾಂಜ್ರೆ ಅವರನ್ನು ಸಮತಾ ನಗರ ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ನೌಕಾಪಡೆಯ ಮಾಜಿ ಅಧಿಕಾರಿ ಮದನ್‌ ಶರ್ಮಾ, ‘ನಾನು ಫಾರ್ವರ್ಡ್ ಮಾಡಿದ ಸಂದೇಶದ ಹಿನ್ನೆಲೆಯಲ್ಲಿ ಬೆದರಿಕೆ ಕರೆಗಳು ಬಂದಿದ್ದವು. ಆ ನಂತರ ಎಂಟರಿಂದ ಹತ್ತು ಜನರು ಇಂದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನನ್ನ ಇಡೀ ಜೀವನವನ್ನು ನಾನು ರಾಷ್ಟ್ರಕ್ಕಾಗಿ ಮುಡಿಪಿಟ್ಟಿದ್ದೇನೆ. ಈ ರೀತಿಯ ಸರ್ಕಾರ ಅಸ್ತಿತ್ವದಲ್ಲಿರಬಾರದು’ ಎಂದು ಹೇಳಿದ್ದಾರೆ.

Facebook Comments

comments