ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಮಹಿಳೆಗೆ ಕೊರೊನಾ

ಮಂಗಳೂರು ಮೇ.23: ಜಿಲ್ಲೆಯಲ್ಲಿ ಇಂದು ಮೂರು ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ಅದರಲ್ಲಿ ಕಳೆದವಾರ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗೆ ನಿನ್ನೆ ಸಂಜೆ ಕೊರೊನಾ ಸೊಂಕು ಇರುವುದು ದೃಢಪಟ್ಟಿತ್ತು. ಅದಲ್ಲದೆ ಮಹಾರಾಷ್ಟ್ರದಿಂದ ಹಿಂತಿರುಗಿದ 20 ವರ್ಷದ ಯುವಕ ಹಾಗೂ 41 ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕು ಇರುವುದು ಖಚಿತವಾಗಿದೆ.

ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಮಹಿಳೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಅವರ ಗಂಟಲ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಪರೀಕ್ಷೆ ಮಾಡಿದಾಗ ಸೋಂಕು ಪತ್ತೆಯಾಗಿದೆ. ಮಹಿಳೆಯಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಗ್ರಾಮಸ್ಥರೆ ಒತ್ತಾಯ ಮಾಡಿ ಪರೀಕ್ಷೆಗೊಳಪಡುವಂತೆ ತಿಳಿಸಿದ್ದರು. ಇದೀಗ ಮಹಿಳೆಯನ್ನು ಕೋವಿಡ್ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದೆ.ಇನ್ನು ಶಿರ್ಲಾಲು ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ.

ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್ ನಲ್ಲಿದ್ದ ಯುವಕನಿಗೂ ಸೋಂಕು ದೃಢವಾಗಿದೆ. ಖಾಸಗಿ ಲ್ಯಾಬ್ ನಲ್ಲಿ ಟೆಸ್ಟ್ ಮಾಡಿಸಿದಾಗ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 65 ಕ್ಕೆ ಏರಿಕೆಯಾಗಿದೆ.