Connect with us

LATEST NEWS

ವೃದ್ಧ ಮಹಿಳೆಯನ್ನು 6 ಕಿಮೀ ಹೊತ್ತು ತಿರುಪತಿ ತಲುಪಿಸಿದ ಕಾನ್ಸ್‌ಟೇಬಲ್‌ ಶೇಖ್‌‌ ಹರ್ಷದ್..!

ಆಂಧ್ರ ಪ್ರದೇಶ, ಡಿಸೆಂಬರ್ 26 : ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಒಮ್ಮೆಯಾದರೂ ತೆರಳಿ ವೆಂಕಟರಮಣನ ದರ್ಶನ ಪಡೆಯಬೇಕೆಂದು ಹಲವರು ನಂಬಿರುತ್ತಾರೆ. ಅದರಂತೆ ಎರಡು ದಿನಗಳ ಹಿಂದೆ ಮಹಿಳೆಯೊಬ್ಬರು ತನ್ನ ಕುಟುಂಬ ಸಮೇತ ತಿರುಪತಿ ದೇವಾಸ್ಥಾನಕ್ಕೆ ತೆರಳಿದ್ದರು.

ತಿರುಪತಿ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ದಾಟಿ ಸನ್ನಿಧಾನವನ್ನು ತಲುಪಲು ನಿರ್ಧರಿಸಿದ್ದ ಕುಟುಂಬ 65 ವರ್ಷದ ವೃದ್ಧ ಮಹಿಳೆಯ ಜೊತೆ ಕಾಲ್ನಡಿಗೆ ಶುರು ಮಾಡಿದೆ. ಸುಮಾರು ಹನ್ನೊಂದು ಕಿಮೀ ದೂರದಲ್ಲಿರುವ ವೆಂಕಟೇಶ್ವರನ ಸನ್ನಿಧಾನಕ್ಕೆ ನಡಿಗೆ ಆರಂಭಿಸಿದ ತಂಡ ಐದು ಕಿಮೀ ದೂರ ತಲುಪುವಾಗ ಸುಸ್ತಾಗಿದೆ. ವೃದ್ಧ ಮಹಿಳೆಗೆ ಇನ್ನು ನಡೆಯಲು ಸಾಧ್ಯವೇ ಇಲ್ಲ ಎನ್ನುವಷ್ಟು ನಿತ್ರಾಣ ಆಗಿತ್ತು.

ಈ  ಸಂದರ್ಭ ಅಲ್ಲೇ ಕರ್ತವ್ಯದಲ್ಲಿದ್ದ ದೇವಾಲಯಕ್ಕೆ ಹೋಗಿ ಬರುತ್ತಿದ್ದ ಜನರನ್ನು ಗಮನಿಸುತ್ತಿದ್ದ ಆಂಧ್ರ ಪೊಲೀಸ್‌ ಇಲಾಖೆಯ ಕಾನ್ಸ್‌ಟೇಬಲ್‌ ಶೇಖ್‌‌ ಹರ್ಷದ್‌ ಅವರು ಕುಟುಂಬದ ನೆರವಿಗೆ ಬಂದಿದ್ದಾರೆ. ಮಹಿಳೆ ಸುಸ್ತಾಗಿರೋದನ್ನು ಅರಿತ ಹರ್ಷದ್‌ ಅವರು ತಾನೇ ಮಹಿಳೆಯನ್ನು ಹೊತ್ತು ಸಾಗುವುದಾಗಿ ತಿಳಿಸಿದ್ದಾರೆ. ಅದರಂತೆ ಕಾನ್ಸ್ಟ್‌ಟೇಬಲ್‌ ಹರ್ಷದ್‌ ಅವರು 63 ಕೆಜಿ ತೂಕದ ವೃದ್ಧ ಮಹಿಳೆಯನ್ನು ತನ್ನ ಹೆಗಲ ಮೇಲೆ ಹೊತ್ತು ಬೆಟ್ಟದಲ್ಲಿ ಸುಮಾರು ಆರು ಕಿಲೋ ಮೀಟರ್‌ ದೂರ ಸಾಗಿ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ತಲುಪಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರು ಧರ್ಮ,ಜಾತಿ ಅಂತಾ ಬಡಿದಾಡುತ್ತಿರುವ ಈ ಕಾಲದಲ್ಲಿ ಅವೆಲ್ಲವನ್ನು ಮರೆತು ಶೇಖ್‌‌ ಹರ್ಷದ್‌ ಅವರ ಮಾಡಿದ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.