LATEST NEWS
ಪ್ರತ್ಯೇಕ ಮರಳು ನೀತಿಗೆ ಸಿಎಂ ಒಪ್ಪಿಗೆ- ಕಾಗೋಡು ತಿಮ್ಮಪ್ಪ

ಪ್ರತ್ಯೇಕ ಮರಳು ನೀತಿಗೆ ಸಿಎಂ ಒಪ್ಪಿಗೆ- ಕಾಗೋಡು ತಿಮ್ಮಪ್ಪ
ಉಡುಪಿ ಫೆಬ್ರವರಿ 14: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ಜಾರಿಗೆ ತರಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ರಾಜ್ಯದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ. ಅವರು ಬುಧವಾರ ಬೈಂದೂರಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಂಯಕ್ತ ಆಶ್ರಯದಲ್ಲಿ ನಡೆದ , ಬೈಂದೂರು ನೂತನ ತಾಲೂಕು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗೆ ಸಂಬಂಧಪಟ್ಟಂತೆ ಪ್ರತ್ಯೇಕ ಮರಳು ನೀತಿ ಜಾರಿಗೆ ತರಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲಿ ಜಾರಿಗೆ ಬರಲಿದೆ ಎಂದು ಹೇಳಿದ ಸಚಿವರು, ರಾಜ್ಯದಲ್ಲಿ ಜಾಗದ ಹಕ್ಕು ಪಡೆಯುವ ಕುರಿತಂತೆ ಅರ್ಜಿ ಸಲ್ಲಿಸಿರುವ ಅರ್ಹ ಯಾರೂ ಬಿಟ್ಟು ಹೋಗದಂತೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಸ್ಥಳ ಪರಿಶೀಲನೆ ಸಮಯದಲ್ಲಿ ಗ್ರಾಮ ಲೆಕ್ಕಿಗರು ಮತ್ತು ಸಂಬಂಧಪಟ್ಟ ಪಂಚಾಯತ್‍ನ ಪಿಡಿಓ ಗಳು ನಕ್ಷೆಯೊಂದಿಗೆ ಜಂಟಿಯಾಗಿ ತೆರಳಿ ಪರಿಶೀಲನೆ ನಡೆಸುವಂತೆ ಹಾಗೂ ಅರ್ಜಿ ಹಾಕಲು ಬಿಟ್ಟು ಹೋಗಿರುವವರಿಂದ ಅರ್ಜಿ ಪಡೆಯುವಂತೆ ಸೂಚಿಸಿಲಾಗಿದೆ, ವೇಳಾಪಟ್ಟಿ ನಿಗಧಿಪಡಿಸಿಕೊಂಡು ಕಾರ್ಯ ನಿರ್ವಹಿಸಿ, ಯಾವುದೇ ಕಾರಣಕ್ಕೂ ಅಧಿಕಾರಿಗಳಲ್ಲಿ ಉದಾಸೀನ ಪ್ರವೃತ್ತಿ ಸಹಿಸುವುದಿಲ್ಲ, ಭೂಮಿಯ ಹಕ್ಕು ಅಲ್ಲಿ ವಾಸಿಸುವವನಿಗೆ ದೊರೆಯಲೇ ಬೇಕು , ಮೂಲಗೇಣಿ ಕುರಿತಂತೆ ಹೈಕೋರ್ಟ್‍ನಲ್ಲಿ ತಡೆ ಇದ್ದು, ಶೀಘ್ರದಲ್ಲಿ ತಡೆಯನ್ನು ತೆರವುಗೊಳಿಸಿ, ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಹೇಳಿದರು.

ಡೀಮ್ಡ್ ಫಾರೆಸ್ಟ್ ಸಂಬಂಧಪಟ್ಟಂತೆ ಕೇಂದ್ರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದ ಸಚಿವರು, ಅರಣ್ಯ ಭೂಮಿಗೆ ಸಂಬಂಧಪಟ್ಟ ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹಿಂದಿನ ಬಜೆಟ್‍ನಲ್ಲಿ ಘೋಷಿಸಿದಂತೆ 50 ಹೊಸ ತಾಲೂಕುಗಳನ್ನು ಅಧಿಕೃತವಾಗಿ ಘೋಷಣೆ ಮಾಡಿ, ಅಸ್ತಿತ್ವಕ್ಕೆ ತಂದಿದ್ದೇವೆ,ರಾಜ್ಯದಲ್ಲೇ ಪ್ರಥಮವಾಗಿ ಬೈಂದೂರು ತಾಲೂಕನ್ನು ಉದ್ಘಾಟಿಸಲಾಗಿದೆ, ತಾಲೂಕಿಗೆ ಅಗತ್ಯವಿರುವ ಮಿನಿ ವಿಧಾನಸೌಧ ನಿರ್ಮಾಣ ಕುರಿತಂತೆ ಅಂದಾಜುಪಟ್ಟಿ ಮತ್ತು ನಕ್ಷೆ ನೀಡಿದರೆ ಶೀಘ್ರದಲ್ಲಿ ಅನುಮೋದನೆ ನೀಡಲಾಗುವುದು, ರಾಜ್ಯದಲ್ಲಿ ಹೊಸದಾಗಿ ಜಾರಿಗೆ ಬಂದಿರುವ ಎಲ್ಲಾ 50 ತಾಲೂಕುಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಕಾಗೋಡು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಜನಾಭಿಪ್ರಾಯದಂತೆ ಯಾವುದೇ ಗೊಂದಲಕ್ಕೆ ಆಸ್ಪದ ನೀಡದ ರೀತಿಯಲ್ಲಿ ಬೈಂದೂರು ತಾಲೂಕು ರಚನೆಯಾಗಿದೆ, ನೂತನ ತಾಲೂಕಿಗೆ ಅಗತ್ಯ ಸಿಬ್ಬಂದಿ ನಿಯೋಜನೆ, ತಾಲೂಕು ಪಂಚಾಯತ್ ಕಟ್ಟಡ, ತಾಲೂಕು ನ್ಯಾಯಾಲಯ, ಮಿನಿ ವಿಧಾನಸೌಧ ನಿರ್ಮಿಸಿ , ಮಾದರಿ ತಾಲೂಕನ್ನಾಗಿ ರೂಪಿಸಲಾಗುವುದು, ಬಸ್ ನಿಲ್ದಾಣಕ್ಕೆ ಈಗಾಗಲೇ 8 ಎಕ್ರೆ ಜಾಗ ಮಂಜೂರಾಗಿದ್ದು, 11 ಕೋಟಿ ವೆಚ್ಚದ ಬಸ್ ನಿಲ್ದಾಣ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಂದಾಯ ಸಚಿವರ ಸಮ್ಮಾನಿಸಲಾಯಿತು. ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಲಾಯಿತು.