BANTWAL
ಕಾಂಗ್ರೇಸ್ ಡೀಲ್ ಗೆ ಉರುಳಿದ ಎಸ್ ಡಿಪಿಐ ?
ಕಾಂಗ್ರೇಸ್ ಡೀಲ್ ಗೆ ಉರುಳಿದ ಎಸ್ ಡಿಪಿಐ ?
ಮಂಗಳೂರು ಏಪ್ರಿಲ್ 25: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಾವು ಮುಂಗುಸಿಯಂತಿದ್ದ ಎರಡು ಪಕ್ಷಗಳು ಚುನಾವಣೆಗೋಸ್ಕರವಾಗಿ ಒಂದಾದ ಘಟನೆ ನಡೆದಿದೆ. ಚುನಾವಣೆಯಲ್ಲಿ ಕಾಂಗ್ರೇಸ್ ವಿರುದ್ದ ತೊಡೆತಟ್ಟಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಎಸ್ ಡಿಪಿಐ ಈಗ ಕಾಂಗ್ರೇಸ್ ನ ತಂತ್ರಕ್ಕೆ ಬಾಲ ಮುದುರಿಕೊಂಡಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಚುನಾವಣೆಯ ಕಾವು ಏರುತ್ತಿದ್ದಂತೆ ಮೈತ್ರಿ ಮಾತುಕತೆ ಮುಂದುವರೆದಿದೆ. ಎಸ್ ಡಿಪಿಐ ಕೋಮುವಾದಿ ಪಕ್ಷ ಎಂದು ಟೀಕಿಸುತ್ತಾ ಬಂದಿದ್ದ ಕಾಂಗ್ರೇಸ್ ಈಗ ಚುನಾವಣೆ ಸಂದರ್ಭದಲ್ಲಿ ಅದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರಗಳಾದ ಬಂಟ್ವಾಳ, ಮಂಗಳೂರು ಉತ್ತರ ಮತ್ತು ಸುಳ್ಯದಲ್ಲಿ ಮುಸ್ಲಿಂ ಮತಗಳು ನಿರ್ಣಾಯಕವಾಗಿದ್ದು ಮತ ವಿಭಜನೆಯಾಗದಂತೆ ತಡೆಯಲು ಕಾಂಗ್ರೆಸ್ ಮುಂದಾಗಿದೆ. ಇದಕ್ಕಾಗಿ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡಿರುವ ಎಸ್ ಡಿಪಿಐ ಪಕ್ಷದ ಅಭ್ಯರ್ಥಿಗಳು ಈ ಬಾರಿ ಚುನಾವಣಾ ಕಣಕ್ಕಿಳಿಸದಂತೆ ಕಾಂಗ್ರೆಸ್ ತಂತ್ರ ಹೂಡಿದೆ.
ಸಚಿವ ರಮಾನಾಥ ರೈ ಪ್ರತಿನಿಧಿಸುವ ಬಂಟ್ವಾಳ ಕ್ಷೇತ್ರದಲ್ಲಿ ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ನಾಮಪತ್ರ ಸಲ್ಲಿಸಿದ್ದರು. ಆದರೆ, ಈಗ ಎಸ್ ಡಿಪಿಐ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವ ಕಾಂಗ್ರೆಸ್ ಮುಖಂಡರು ರಿಯಾಜ್ ನಾಮಪತ್ರ ಹಿಂದೆಗೆಯಲು ಮುಂದಾಗಿದ್ದಾರೆ. ಈ ವಿಚಾರವನ್ನು ಎಸ್ ಡಿಪಿಐ ನಾಯಕರು ಒಪ್ಪಿಕೊಂಡಿದ್ದು ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸದಂತೆ ತಡೆಯಲು ಈ ನಿರ್ಧಾರ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
ಹಿಂದೆ ಮಹಮ್ಮದ್ ಖುರೀಷಿ ಮೇಲೆ ನಡೆದ ದೌರ್ಜನ್ಯ ಪ್ರಕರಣ , ಎಸ್ ಡಿ ಪಿ ಐ ಮುಖಂಡ ಅಶ್ರಫ್ ಕಲಾಯಿ ಸೇರಿದಂತೆ ಜಲೀಲ್ ಕರೋಪಾಡಿ ಕೊಲೆ ಪ್ರಕರಣ ವಿರೋಧಿಸಿ ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ವಿರುದ್ಧ ಸಮರವನ್ನೇ ಸಾರಿತ್ತು. ಪ್ರತಿಭಟನೆ ವೇಳೆ ಪಿ ಎಫ್ ಐ ಹಾಗು ಎಸ್ ಡಿ ಪಿ ಐ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ ನಡೆಸಿದಾಗ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ .ರಮಾನಾಥ್ ರೈ ವಿರುದ್ಧ ಜನಾಂದೋಲನವನ್ನೇ ರೂಪಿಸಿತ್ತು. ಆದರೆ ಈಗ ಅದೇ ಎಸ್ ಡಿಪಿಐ ಕಾಂಗ್ರೆಸ್ ಗೆಲುವಿಗೆ ಮೈತ್ರಿ ಮಾಡಿಕೊಂಡಿದೆ.
ಪಿ ಎಫ್ ಐ ಹಾಗು ಎಸ್ ಡಿ ಪಿ ಐ ಪಕ್ಷದನ್ನು ಕೋಮುವಾದಿ ಪಕ್ಷ , ಸಂಘಟನೆ ಎಂದು ಕಟುವಾಗಿ ಟೀಕಿಸಿದ್ದ ರಮಾನಾಥ್ ರೈ ಈಗ ಚುನಾವಣೆ ಸಂದರ್ಭದಲ್ಲಿ ಬಂಟ್ವಾಳ ಕ್ಷೆತ್ರದಲ್ಲಿ ತಮ್ಮ ಗೆಲುವಿಗೆ ಎಸ್ ಡಿ ಪಿ ಐ ಮುಖಂಡರನ್ನು ತಬ್ಬಿಕೊಂಡಿದ್ದಾರೆ. ಈ ಮೈತ್ರಿಯ ಹಿಂದೆ ಭಾರೀ ಡೀಲ್ ಆಗಿರುವ ಸಾದ್ಯತೆ ಇದೆ.
ಗೆಲುಗಾಗಿ ಕರಾವಳಿಯ ವಿಧಾನ ಸಭಾ ಕ್ಷೇತ್ರಗಳಲ್ಲಿ ಈ ಬಾರಿ ನೆಕ್ ಟು ನೆಕ್ ಫೈಟ್ ಸಾಧ್ಯತೆಯಿದೆ. ಎಸ್ ಡಿಪಿಐ ನ ಈ ನಿರ್ಧಾರ ಮಾತ್ರ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.
ಅನ್ಯಾಯದ ವಿರುದ್ದ ಹೋರಾಟ ಎಂದು ಸಮುದಾಯದ ದಿಕ್ಕು ತಪ್ಪಿಸಿ ಎಸ್ ಡಿಪಿಐ ಈಗ ಕಾಂಗ್ರೇಸ್ ಜೊತೆ ಮೈತ್ರಿ ಮಾಡಿಕೊಂಡಿರುವುದರ ವಿರುದ್ದ ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ.
You must be logged in to post a comment Login