LATEST NEWS
ಉಡುಪಿ – ಸ್ಕೂಟರ್ ಮೇಲೆ ಮಲಗಿದ್ದವನ ರಸ್ತೆ ಬದಿ ಮಲಗಿಸಿ ಸ್ಕೂಟರ್ ಕದ್ದ ಕಳ್ಳರು

ಪಡುಬಿದ್ರಿ ಫೆಬ್ರವರಿ 14 : ರಸ್ತೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸಿ ಅದರ ಮೇಲೆ ಮಲಗಿದ್ದ ವ್ಯಕ್ತಿಯನ್ನು ಕಳ್ಳರು ನಿಧಾನವಾಗಿ ಕೆಳಗೆ ಇಳಿಸಿ ರಸ್ತೆ ಬದಿಯಲ್ಲಿ ಮಲಗಿಸಿ ಸ್ಕೂಟರ್ ನ್ನು ಕಳವು ಮಾಡಿದ ಘಟ ಭಾನುವಾರ ತಡರಾತ್ರಿ ಕಾಪು ಕೊಪ್ಪಲಂಗಡಿಯಲ್ಲಿ ನಡೆದಿದೆ.
ಕಾರ್ಕಳ ಮುಡಾರು ಗ್ರಾಮದ ಚೇತನ್ ವಂಚನೆಗೊಳಗಾದವರು. ಸ್ಕೂಟರ್‌ನಲ್ಲಿ ಸುರತ್ಕಲ್‌ನತ್ತ ತೆರಳುತ್ತಿದ್ದ ಚೇತನ್ ಸ್ಕೂಟರ್ ಸವಾರಿ ಮಾಡಲು ಕಷ್ಟವಾಗಿದ್ದುದರಿಂದ ತನ್ನ ಸ್ಕೂಟರನ್ನು ರಾಷ್ಟ್ರೀಯ ಹೆದ್ದಾರಿ 66ರ ಕೊಪ್ಪಲಂಗಡಿಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಸ್ಕೂಟರಿನಲ್ಲಿ ತಲೆ ಇಟ್ಟು ಮಲಗಿದ್ದರು. ಮುಂಜಾನೆ 2.30ರ ವೇಳೆಗೆ ಎಚ್ಚರವಾದಾಗ ಚೇತನ್ ಹೆಲ್ಮೆಟ್ ಸಹಿತ ರಸ್ತೆ ಬದಿ ಮಲಗಿದ್ದು ಅವರ ಸ್ಕೂಟರ್, ಮೊಬೈಲ್, ಪರ್ಸ್ ಇಲ್ಲದೇ ಇದ್ದು ಯಾರೋ ಕಳ್ಳರು ಅಪಹರಿಸಿರುವುದು ಗೊತ್ತಾಗಿದೆ. ಕಳವಾಗಿರುವ ಪರ್ಸ್‌ನಲ್ಲಿ ಅಗತ್ಯ ದಾಖಲೆಗಳು ಇದ್ದವು ಎಂದು ಪ್ರಕರಣ ದಾಖಲಿಸಿರುವ ಕಾಪು ಠಾಣೆ ಪೊಲೀಸರು ವಿವರಿಸಿದ್ದಾರೆ.
