LATEST NEWS
ನಾಡು ಕಂಡ ಅಪರೂಪದ ವಿದ್ವಾಂಸ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ
ಉಡುಪಿ ಡಿಸೆಂಬರ್ 13: ನಾಡು ಕಂಡ ಅಪರೂಪದ ವಿದ್ವಾಂಸ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಅವರು ನಿಧನರಾಗಿದ್ದಾರೆ. ಉಡುಪಿಯ ಅಂಬಲಪಾಡಿ ನಿವಾಸದಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ಗೋವಿಂದಾಚಾರ್ಯ ಅವರು ಪ್ರವಚನಕಾರ, ಮಧ್ವ ಸಿದ್ಧಾಂತದ ಪ್ರತಿಪಾದಕರಾಗಿದ್ದರು, ಪತ್ರಕರ್ತರಾಗಿ ಅನೇಕ ಅಂಕಗಳನ್ನು ಬರೆದಿದ್ದ ಬನ್ನಂಜೆ ಅವರು ನಟ ಡಾ.ವಿಷ್ಣುವರ್ಧನ್ ಆಧ್ಯಾತ್ಮಿಕ ಗುರುಗಳಾಗಿದ್ದರು.
ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ 1936 ಆಗಸ್ಟ್ 3ರಂದು ಬನ್ನಂಜೆಯಲ್ಲಿ ವಿದ್ವಾಂಸರಾದ ತರ್ಕಕೇಸರಿ ಶ್ರೀ ನಾರಾಯಣಾಚಾರ್ಯರ ಸುಪುತ್ರರಾಗಿ ಜನಿಸಿದ ಗೋವಿಂದಾಚಾರ್ಯರು ಬಾಲ್ಯದಲ್ಲಿ ವೈದಿಕ ಶಿಕ್ಷಣವನ್ನು ತೀರ್ಥರೂಪರಿಂದಲೇ ಪಡೆದರು. ಮುಂದುವರೆದ ವಿದ್ಯಾರ್ಜನೆಯನ್ನು ಶ್ರೀ ಶ್ರೀ ವಿದ್ಯಾಮಾನ್ಯ ತೀರ್ಥಸ್ವಾಮೀಜಿ, ಕಲಿಯೂರು ಮಠ ಮತ್ತು ಶ್ರೀ ಶ್ರೀ ವಿದ್ಯಾ ಸಮುದ್ರ ತೀರ್ಥರು, ಕಾಣಿಯೂರು ಮಠ ಇವರಿಂದ ಪಡೆದರು. ಬಾಲ್ಯದಲ್ಲಿಯೇ ಬಹಳ ಪ್ರತಿಭೆಗಳಿಂದ ಮಿಂಚಿದ ಇವರು ಅನೇಕ ಲೇಖನಗಳನ್ನು ಬರೆಯುತ್ತಿದ್ದರು. ತಮ್ಮ ಪ್ರವಚನದ ಮೂಲಕ ವಿಶ್ವದಲ್ಲೇ ವೇದ ಪುರಾಣಗಳ ಕುರಿತು ಹೊಸ ಸಂಚಲನ ಮೂಡಿಸಿದವರು. ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಪುರುಷ ಸೂಕ್ತ ಶಿವ ಸೂಕ್ತ ಶ್ರೀ ಸೂಕ್ತ ಸೇರಿದಂತೆ ಹಲವು ಸೂಕ್ತ ಮಂತ್ರಗಳಿಗೆ ಮತ್ತು ಮದ್ವಾಚಾರ್ಯರ ಮಾಧ್ವ ರಾಮಾಯಣ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಉಡುಪಿಯ ಅಷ್ಠ ಮಠಗಳಿಗೆ ಸಮೀಪ ವರ್ತಿಯಾಗಿ ಅನೇಕ ದಶಕಗಳಿಂದ ಪಾಠ ಪ್ರವಚನದ ಜೊತೆಗೆ ಅಗತ್ಯ ಸಲಹೆ ನೀಡುತ್ತಿದ್ದರು. ಅವರ ಅಗಲುವಿಕೆಯಿಂದ ಆಧ್ಯಾತ್ಮದ ಲೋಕದ ಅಮೂಲ್ಯ ಮಣಿಯೊಂದು ಕಣ್ಮರೆಯಾಗಿದೆ.
ಬನ್ನಂಜೆ ಗೋವಿಂದಾಚಾರ್ಯರು ಅನೇಕ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಜನಸಾಮಾನ್ಯರಿಗೆ ತಲುಪುವಂತೆ ಮಾಡಿದ್ದಾರೆ. ಹದಿಮೂರನೆಯ ಶತಮಾನದಲ್ಲಿ ಶ್ರೀ ಮಧ್ವಾಚಾರ್ಯರ ನೇರ ಶಿಷ್ಯರಾದ ಶ್ರೀ ಹೃಷೀಕೇಶತೀರ್ಥರು ರಚಿಸಿದ್ದ ಮಧ್ವಾಚಾರ್ಯರ ವ್ಯಾಖ್ಯಾನಗಳನ್ನು ಸುಮಾರು 2000 ಪುಟಗಳಷ್ಟು ಸುದೀರ್ಘವಾದ ಗ್ರಂಥರೂಪವಾಗಿ ಅಚ್ಚುಕಟ್ಟಾಗಿ ಓದುಗರ ಮುಂದಿಟ್ಟಿದ್ದಾರೆ. ಮಧ್ವಾಚಾರ್ಯರ ಹಲವಾರು ಘನವೇತ್ತ ಕೃತಿಗಳೂ ಕೂಡಾ ಈ ಗ್ರಂಥದ ಭಾಗವಾಗಿವೆ. ಅವರ ‘ಆಚಾರ್ಯ ಮಧ್ವ: ಬದುಕು ಬರಹ’ ಕೃತಿಯನ್ನು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರವು ಪ್ರಕಟಿಸಿದೆ.
ಅದ್ಭುತ ಸ್ಮರಣ ಶಕ್ತಿಗೆ ಇನ್ನೊಂದು ಹೆಸರೇ ಬನ್ನಂಜೆ ಗೋವಿಂದಾಚಾರ್ಯರು. ಸಂಸ್ಕೃತದ ಖ್ಯಾತ ಕಾದಂಬರಿಗಳಾದ ಬಾಣ ಭಟ್ಟನ ಕಾದಂಬರಿ ಕಾಳಿದಾಸನ ಶಾಕುಂತಲಾ ಶೂದ್ರಕನ ಮೃಚ್ಛಕಟಿಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೇವಲ ವೇದ ಪುರಾಣಗಳ ಅನುವಾದ ಟಿಪ್ಪಣಿ ಮಾತ್ರವಲ್ಲದೆ ಜಿ ವಿ ಅಯ್ಯರ್ ಅವರ ಶ್ರೀ ಶಂಕರಾಚಾರ್ಯ ಮದ್ವಾಚಾರ್ಯ ರಾಮಾನುಜಾಚಾರ್ಯ ಚಲನಚುತ್ರಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸಿ ಸಂಭಾಷಣೆ ರಚಿಸಿದ್ದಾರೆ. ಖ್ಯಾತ ನಟ ವಿಷ್ಣು ವರ್ಧನ್ ಅವರ ಆದ್ಯಾತ್ಮ ಗುರುಗಳಾಗಿದ್ದ ಬನ್ನಂಜೆ ಅವರಿಗೆ ಸಾವಿರಾರು ಶಿಷ್ಯಂದಿರು ಇದ್ದಾರೆ. ಅವರ ಪ್ರವಚನ ಮತ್ತು ಪಾಂಡಿತ್ಯದ ಪ್ರಭಾವದಿಂದ ಅದೆಷ್ಟೋ ಜನ ಆದ್ಯಾತ್ಮ ಲೋಕದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ