LATEST NEWS
2014ರ ಮಂಗಳೂರು ವೈದ್ಯಕೀಯ ವಿದ್ಯಾರ್ಥಿ ಸಾವಿನ ತನಿಖೆ ಸಿಬಿಐಗೆ

ಮಂಗಳೂರು ನವೆಂಬರ್ 8: 2014ರಲ್ಲಿ ಇಲ್ಲಿ ಶಿರಚ್ಛೇದಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಂಗಳೂರು ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಕೇರಳ ಮೂಲದ ರೋಹಿತ್ ರಾಧಾಕೃಷ್ಣನ್ ಸಾವಿನ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಮಂಗಳೂರಿನಲ್ಲಿ ವಿದಾಭ್ಯಾಸ ಮಾಡುತ್ತಿದ್ದ ರೋಹಿತ್ ರಾಧಾಕೃಷ್ಣನ್ ಅವರ ಮೃತದೇಹ 2014ರ ಮಾ.23ರಂದು ತಣ್ಣೀರುಬಾವಿ ಬೀಚ್‌ನ ರಸ್ತೆ ಬದಿ ಪೊದೆಗಳ ಬಳಿ ತಲೆ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದು ಅಪಘಾತ ಪ್ರಕರಣವೆಂದು ದಾಖಲಾಗಿತ್ತು.
ವಕೀಲರಾಗಿರುವ ರೋಹಿತ್ ಅವರ ತಂದೆ ಕೇರಳ ನಿವಾಸಿ ಎಂ.ಎಸ್.ರಾಧಾಕೃಷ್ಣನ್ ಅವರು ಪ್ರಕರಣದ ಬಗ್ಗೆ ಸಂದೇಹ ವ್ಯಕ್ತಪಡಿಸಿ ಹೆಚ್ಚಿನ ತನಿಖೆಗೆ ಒತ್ತಾಯಿಸಿದ್ದರು. ಬಳಿಕ ಈ ಬಗ್ಗೆ ಸಿಐಡಿ ತನಿಖೆ ನಡೆಸಿತ್ತು. ಸಿಐಡಿ ತನಿಖೆಯ ಬಗ್ಗೆಯೂ ರಾಧಾಕೃಷ್ಣನ್ ಅವರು ಅಸಮಾಧಾನ ವ್ಯಕ್ತಪಡಿಸಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ಆದೇಶ ನೀಡಿದೆ.

ಸಿಐಡಿ ಸಮರ್ಪಕವಾಗಿ ತನಿಖೆ ನಡೆಸಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಅರ್ಜಿದಾರ ರಾಧಾಕೃಷ್ಣನ್ ಅವರಿಗೆ ನ್ಯಾಯಾಲಯ ವೆಚ್ಚವಾಗಿ 1 ಲಕ್ಷ ರೂ. ನಾಲ್ಕು ವಾರದೊಳಗೆ ಪಾವತಿಸಬೇಕು ಎಂದು ಸಿಐಡಿಗೆ ಆದೇಶ ಮಾಡಿದೆ.